ಬೆಂಗಳೂರು: ಬೆಂಗಳೂರಿನಲ್ಲಿ ಇಂದು ಬೆಳ್ಳಂಬೆಳಗ್ಗೆಯೇ ಧಾರಾಕಾರ ಮಳೆ ಸುರಿಯುತ್ತಿದೆ. ಬೆಂಗಳೂರಿನ ಮೆಜೆಸ್ಟಿಕ್, ಕಾರ್ಪೊರೇಷನ್ ಸರ್ಕಲ್, ಶಾಂತಿನಗರ, ಕೆ.ಆರ್.ಮಾರ್ಕೆಟ್, ವಿಧಾನಸೌಧ, ಶಿವಾಜಿನಗರ, ಬಸವನಗುಡಿ, ಜಯನಗರ, ಶ್ರೀನಗರ, ಹನುಮಂತನಗರ, ತ್ಯಾಗರಾಜನಗರ, ಕೋರಮಂಗಲ, ರಿಚ್ಮಂಡ್ ಸರ್ಕಲ್, ಮಲ್ಲೇಶ್ವರಂ, ಯಶವಂತಪುರ, ಪೀಣ್ಯ, ಜಾಲಹಳ್ಳಿ, ದಾಸರಹಳ್ಳಿ, ರಾಜಾಜಿನಗರ ಸೇರಿದಂತೆ ಸುತ್ತಮುತ್ತ ಧಾರಾಕಾರ ಮಳೆಯಾಯಿತು.
ಮಕ್ಕಳು ಮತ್ತು ಉದ್ಯೋಗಿಗಳು ತುಂತುರು ಮಳೆಯಲ್ಲಿಯೇ ನೆನೆದುಕೊಂಡು ಸ್ಕೂಲ್, ಕಾಲೇಜು, ಕೆಲಸಕ್ಕೆ ಹೋಗುತ್ತಿದ್ದಾರೆ. ಕಾರ್ಪೊ ರೇಷನ್ ಸರ್ಕಲ್ ಸುತ್ತಮುತ್ತ ತುಂತುರು ಮಳೆ ಇನ್ನೂ ಸುರಿಯುತ್ತಿದ್ದು, ಮಳೆಗೆ ವಾಹನ ಸವಾರರು, ಪಾದಚಾರಿಗಳು ಪರದಾಟಪಡುವಂತಾಗಿದೆ.ನಂತರ ಜಿಟಿಜಿಟಿ ಸುರಿಯುತ್ತಿರುವ ಮಳೆಯಿಂದಾಗಿ ಕೆಆರ್ ಮಾರುಕಟ್ಟೆ ಸೇರಿದಂತೆ ಅನೇಕ ಕಡೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ.
ನಗರದ ಓಕಳೀಪುರ ಅಂಡರ್ ಪಾಸ್ನಲ್ಲಿ ನೀರು ತುಂಬಿದ್ದು, ಕೆರೆಯಂತಾಗಿದೆ. ಅಂಡರ್ ಪಾಸ್ ಪೂರ್ತಿ ಮಳೆ ನೀರು ತುಂಬಿದ್ದು, ವಾಹನ ಸವಾರರು ಚಾಲನೆಗೆ ಹರಸಾಹಸಪಡುವಂತಾಗಿದೆ.ಅಂಡರ್ ಪಾಸ್ನಲ್ಲಿ ನೀರು ನಿಂತಿರುವ ಕಾರಣ ವಾಹನಗಳು ಟ್ರಾಫಿಕ್ ಜಾಮ್ನಲ್ಲಿ ಸಿಲುಕಿ ಪರದಾಟಪಡುವಂತಾಯಿತು. ಕಿಲೋಮೀಟರ್ಗಟ್ಟಲೇ ಟ್ರಾಫಿಕ್ ಜಾಮ್ ಕೂಡ ಉಂಟಾಗಿದೆ.
ಇಂದು ಬೆಳಿಗ್ಗೆ 5 ಗಂಟೆ ಸುಮಾರಿಗೆ ಎಚ್ಎಂಟಿ ಲೇಔಟ್ನಲ್ಲಿ ಬೃಹತ್ ಗಾತ್ರದಮರವೊಂದು ಉರುಳಿದ ಪರಿಣಾಮ ಕಾರು ಜಖಂ ಆಗಿದೆ ಎಂದು ತಿಳಿದುಬಂದಿದೆ. ಕಳೆದ ಮೂರು ತಿಂಗಳಿನಿಂದಲೂ ಮರವನ್ನು ತೆರವುಗೊಳಿಸುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದರೂ ಇತ್ತ ಕಡೆಗಮನ ಹರಿಸದವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.