ಬೆಂಗಳೂರು: ಪ್ರೀತಿ ವಿಚಾರವಾಗಿ 2 ಮಕ್ಕಳ ತಾಯಿ ಮತ್ತು ಆಕೆಯ ಪ್ರಿಯಕರ ಆತ್ಮಹತ್ಯೆಗೆ ಶರಣಾಗಿರುವ ಧಾರುಣ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.
ಬೆಂಗಳೂರಿನ ರಾಚೇನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ‘ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಮನನೊಂದು ಪ್ರೇಯಿಸಿ ಕೂಡ ಆತ್ಮಹತ್ಯೆ ಮಾಡಿದ್ದಾರೆ. ಮೃತರನ್ನು ಜಾನ್ಸನ್ ಹಾಗೂ ದಿಲ್ಶಾದ್ ಎಂದು ಗುರುತಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ ಥಣಿಸಂದ್ರ ಮೂಲದ ಜಾನ್ಸನ್ ಎಂಬುವವರನ್ನು ದಿಲ್ಶಾದ್ ಪ್ರೀತಿಸುತ್ತಿದ್ದರು. ಸಾಮಾಜಿಕ ಮಾಧ್ಯಮಗಳ ಮೂಲಕ ಇವರಿಬ್ಬರ ಪರಿಚಯವಾಗಿತ್ತು. ಆದರೆ ಮಹಿಳೆಗೆ ವಿಜಯಪುರ ಮೂಲದ ಕೃಷ್ಣ ಎಂಬುವವರ ಜೊತೆ ಅದಾಗಲೇ ಮದುವೆಯಾಗಿತ್ತು.
ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದರು. ಆಕೆಯ ಗಂಡ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ಆದಾಗ್ಯೂ ಜಾನ್ಸನ್ -ದಿಲ್ಶಾದ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಸಮಾಜ ನಮ್ಮ ಪ್ರೀತಿ ಒಪ್ಪಲ್ಲ ಎಂದು ಜಾನ್ಸನ್ ಮನನೊಂದಿದ್ದ. ಬಳಿಕ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ.
ಇಂದು ಬೆಳಗ್ಗೆ ಕೆಲಸಕ್ಕೆ ಹೋದ ಜಾಗದಲ್ಲಿ ಜಾನ್ಸನ್ ಥಣಿಸಂದ್ರದಲ್ಲಿರುವ ತನ್ನ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಅಲ್ಲಿಗೆ ಹೋಗಿದ್ದ ದಿಲ್ಶಾದ್ ಶವ ನೋಡಿಕೊಂಡು ಬಂದಿದ್ದಳು. ಜಾನ್ಸನ್ ಆತ್ಮಹತ್ಯೆಯಿಂದ ಮನನೊಂದಿದ್ದ ಮಹಿಳೆ ಮಧ್ಯಾಹ್ನದ ವೇಳೆಗೆ ತಾನೂ ನೇಣಿಗೆ ಶರಣಾಗಿದ್ದಾಳೆ.
ಪ್ರಿಯಕರನ ಆತ್ಮಹತ್ಯೆಗೆ ಸಂಬಂಧಿಸಿದಂತೆ ಹೆಣ್ಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಂತೆಯೇ ಮಹಿಳೆಯ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸಂಪಿಗೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಿಲ್ಶಾದ್ ತಾಯಿ ಬೇಗಂ ನೀಡಿದ ದೂರಿನ ಆಧಾರದ ಮೇಲೆ, ಅಸ್ವಾಭಾವಿಕ ಸಾವಿನ ಪ್ರಕರಣವನ್ನು ದಾಖಲಿಸಲಾಗಿದೆ.