ಬೆಂಗಳೂರು: ನಟ ದರ್ಶನ್ ಅನ್ನು ನಿನ್ನೆ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ಗೆ ವಿಶೇಷ ಆತಿಥ್ಯ ದೊರೆಯುತ್ತಿದ್ದ ಕಾರಣ ಹಾಗೂ ಒಂದೇ ಪ್ರಕರಣದ ಆರೋಪಿಗಳಿಗೆ ಭೇಟಿ ಮಾಡಲು ಅವಕಾಶ ಸಿಕ್ಕಿದ್ದ ಕಾರಣ ದರ್ಶನ್ ಸೇರಿದಂತೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳನ್ನು ಬೇರೆ ಬೇರೆ ಜೈಲುಗಳಿಗೆ ವರ್ಗಾವಣೆ ಮಾಡಲಾಗಿದೆ. ದರ್ಶನ್ ನಿನ್ನೆ ಬೆಳಿಗ್ಗೆ ಬಳ್ಳಾರಿ ಜೈಲಿಗೆ ಕರೆತರಲಾಯ್ತು.
ದರ್ಶನ್ ಅನ್ನು ಜೈಲಿಗೆ ಕರೆತಂದಾಗ ಅವರ ಬಳಿ ಕೂಲಿಂಗ್ ಗ್ಲಾಸ್ ಇದ್ದಿದ್ದರ ಬಗ್ಗೆ ಚರ್ಚೆಯಾಗಿತ್ತು. ದರ್ಶನ್ ಕೈಯಲ್ಲಿ, ಕಡಗ, ಕೊರಳಲ್ಲಿ ಮಣಿ ಸರ ಇತ್ತು ಎನ್ನಲಾಗಿತ್ತು. ಆದರೆ ಬಳ್ಳಾರಿ ಎಸ್ಪಿ ಇದನ್ನು ಅಲ್ಲಗಳೆದಿದ್ದು, ದರ್ಶನ್ ಕೈಯಲ್ಲಿ ಕಡಗ ಇರಲಿಲ್ಲ ಎಂದಿದ್ದಾರೆ. ಹಾಗೂ ದರ್ಶನ್ ಅವರದ್ದು ಟೆಸ್ಟೆಡ್ ಗ್ಲಾಸು ಎಂದಿದ್ದಾರೆ. ಅದರ ಬಗ್ಗೆ ಪರೀಕ್ಷೆ ಮಾಡುತ್ತೇವೆ ಎಂದಿದ್ದಾರೆ.
ನಿನ್ನೆ ಮಧ್ಯಾಹ್ನ ಊಟ ನಿರಾಕರಿಸಿ ನಿದ್ದೆಗೆ ಜಾರಿದ್ದ ನಟ ದರ್ಶನ್, ನಿನ್ನೆ ರಾತ್ರಿ ಕೊಂಚ ಊಟ ಮಾಡಿದ್ದರು. ಇಂದು ಬೆಳಿಗ್ಗೆ ಜೈಲಿನಲ್ಲಿ ಉಪ್ಪಿಟ್ಟು ಸೇವಿಸಿದ್ದಾರೆ. ಎರಡು ಬ್ಯಾಗಿನ ತುಂಬ ಪುಸ್ತಕಗಳನ್ನು ದರ್ಶನ್ ಬಳ್ಳಾರಿ ಜೈಲಿಗೆ ಕೊಂಡು ಒಯ್ದಿದ್ದು, ಪುಸ್ತಕ ಓದುವುದರಲ್ಲಿ ನಿರತರಾಗಿದ್ದಾರಂತೆ. ಸುಮಾರು 20 ಹೊಸ ಪುಸ್ತಕಗಳನ್ನು ದರ್ಶನ್, ಜೈಲಿಗೆ ತಂದಿದ್ದಾರಂತೆ.
ದರ್ಶನ್ ಇರುವ ಕೇಂದ್ರ ಕಾರಾಗೃಹದ ಸಮೀಪದಲ್ಲಿರುವ ದುರ್ಗಾ ದೇವಿ ದೇವಸ್ಥಾನಕ್ಕೆ ದರ್ಶನ್ ಅಭಿಮಾನಿಗಳು ಭೇಟಿ ನೀಡಲಿದ್ದು, ದರ್ಶನ್ರ ಒಳಿತಾಗಿ ಇಂದು ತೆಂಗಿನ ಕಾಯಿ ಒಡೆದು ವಿಶೇಷ ಪೂಜೆ ಮಾಡಲಿದ್ದಾರೆ. ಈಗ ಬಳ್ಳಾರಿ ಜೈಲಿನಲ್ಲಿ ದರ್ಶನ್ಗೆ ಕೈದಿ ಸಂಖ್ಯೆ 511 ನೀಡಿದ್ದು, ಆ ಸಂಖ್ಯೆಯನ್ನು ಆಟೋಗಳ ಮೇಲೆ, ಬೈಕುಗಳ ಮೇಲೆ ಬರೆದುಕೊಳ್ಳುತ್ತಿದ್ದಾರೆ ಅಭಿಮಾನಿಗಳು.
ದರ್ಶನ್, ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ಪ್ರತಿ ಸೋಮವಾರ ವಿಜಯಲಕ್ಷ್ಮಿ ಅವರು ಜೈಲಿಗೆ ಬಂದು ದರ್ಶನ್ ಅನ್ನು ಭೇಟಿ ಮಾಡುತ್ತಿದ್ದರು. ಹಣ್ಣು, ಬಟ್ಟೆಗಳನ್ನು ನೀಡುತ್ತಿದ್ದರು. ಆದರೆ ಕಳೆದ ಸೋಮವಾರ ಭೇಟಿ ಮಾಡಿರಲಿಲ್ಲ. ಇದೀಗ ಬಳ್ಳಾರಿ ಜೈಲಿಗೆ ದರ್ಶನ್ ವಾಸ್ತವ್ಯ ಬದಲಾಗಿದ್ದು, ವಿಜಯಲಕ್ಷ್ಮಿ ಅವರು ಬಳ್ಳಾರಿ ಜೈಲಿಗೆ ಭೇಟಿ ನೀಡುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ದರ್ಶನ್ ನಟನೆಯ `ಕರಿಯ’ ಸಿನಿಮಾ ಮರು ಬಿಡುಗಡೆ ಆಗಿದ್ದು, ಅಭಿಮಾನಿಗಳು ಅತಿರೇಕದ ಸಂಭ್ರಮಾಚರಣೆ ಮಾಡಿದ್ದಾರೆ. ದರ್ಶನ್ ಕೈದಿ ಸಂಖ್ಯೆಯ ಪೋಸ್ಟರ್ಗಳನ್ನು ಹಾಕಲಾಗಿದೆ. ಮಾಧ್ಯಮಗಳ ವಿರುದ್ಧ ಘೋಷಣೆಗಳನ್ನು ಸಹ ಕೂಗಲಾಗಿದೆ. ಬಳಿಕ ಪೊಲೀಸರು ಬಂದು ದರ್ಶನ್ ಅಭಿಮಾನಿಗಳಿಗೆ `ಬುದ್ಧಿ’ ಹೇಳಿ ಕಟೌಟ್ಗಳನ್ನು ತೆಗೆಸಿದ್ದಾರೆ.