ಬೆಂಗಳೂರು : ರಾಜ್ಯದಲ್ಲಿರುವ ಬೆಸ್ತ ಜನಾಂಗವನ್ನು ಎಸ್.ಟಿ ಪಟ್ಟಿಗೆ ಸೇರಿಸಬೇಕೆಂದು ತಿಪಟೂರಿನ ನಗರಸಭಾ ಸದಸ್ಯ ಟಿ.ಹೆಚ್. ಶ್ರೀನಿವಾಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು ಮುಖ್ಯಮಂತ್ರಿಯವರು ಹೋದಲ್ಲಿ, ಬಂದಲ್ಲಿ ಕೇವಲ ಆಶ್ವಾಸನೆಗಳನ್ನು ನೀಡುತ್ತಾ ಬಂದಿದ್ದಾರೆ ವಿನಃ ಯಾವುದೇ ಜಾತಿ ಜನಾಂಗಕ್ಕೆ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಮುಖ್ಯಮಂತ್ರಿಯವರು ಮೊದಲನೆ ಬಾರಿಗೆ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಅಂದರೆ ಸುಮಾರು ೧೦ ವರ್ಷಗಳ ಹಿಂದೆ ಬೆಸ್ತ, ಬೆಸ್ತರು, ಬುರುಡೆ ಬೆಸ್ತ, ಗಂಗಮತಸ್ಥರು, ಗಂಗೆ ಮಕ್ಕಳು ಇತ್ಯಾದಿ ಹೆಸರಿನಲ್ಲಿ ಕರೆಯಲ್ಪಡುವ ಸಮುದಾಯದ ಸಮಾವೇಶದಲ್ಲಿ ಜನಾಂಗವನ್ನು ಎಸ್.ಟಿ. ಸಮುದಾಯಕ್ಕೆ ಸೇರಿಸಲಾಗುವುದು ಎಂದು ಆಶ್ವಾಸನೆ ನೀಡಿದ್ದೀರಿ. ಆದರೆ ಈಗಲೂ ಕೂಡ ಅದು ಆಶ್ವಾಸನೆಯಾಗೇ ಉಳಿದಿದೆ.
ಆದ್ದರಿಂದ ದಯವಿಟ್ಟು ಬೆಸ್ತ ಜನಾಂಗದವರನ್ನು ಎಸ್.ಟಿ ಜನಾಂಗದವರ ಪಟ್ಟಿಯಲ್ಲಿ ಸೇರಿಸಬೇಕಾಗಿ ವಿನಂತಿಸುತ್ತೇವೆ ಎಂದು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದ್ದಾರೆ. `ಈಗಾಗಲೇ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಹಳ್ಳಿಕಾರರ ಸಮಾವೇಶದಲ್ಲಿ ಮಾತನಾಡಿರುವ ಮುಖ್ಯಮಂತ್ರಿಯವರು ಹಳ್ಳಿಕಾರರ ಬಗ್ಗೆ ಸಹಾನುಭೂತಿ ಇದೆ ಎಂದು ಹೇಳಿ ಖಂಡಿತ ಸಹಾಯ ಮಾಡುತ್ತೇನೆ. ಆ ಸಮುದಾಯ ವನ್ನು ಪ್ರವರ್ಗ ೩ಎಗೆ ಸೇರಿಸಿದ್ದು ಸರಿಯಲ್ಲ. ಪ್ರವರ್ಗ ೧ ಕ್ಕೆ ಸೇರಿಸಬೇಕು ಎನ್ನುವ ಬೇಡಿಕೆಯನ್ನು ವರದಿ ತರಿಸಿಕೊಂಡು ನಂತರ ತೀರ್ಮಾನ ಮಾಡಲಾಗುವುದು ಎಂದು ಭರವಸೆ ನೀಡಿರುತ್ತಾರೆ ಎಂಬುದನ್ನು ಶ್ರೀನಿವಾಸ್ ಅವರು ಸ್ಮರಿಸಿದ್ದಾರೆ.