ನೆಲಮಂಗಲ: ಬೇಸಿಗೆ ಕಾಲ ಶುರುವಾಗುತ್ತಿದೆ ಗಿಡ ಮರಗಳು ಒಣಗುತ್ತಿವೆ ಬೆಟ್ಟ ಗುಡ್ಡ ಅರಣ್ಯ ಪ್ರದೇಶ ಮತ್ತು ಗಿರಿಬೆಟ್ಟಗಳಲ್ಲಿನ ಧಾರ್ಮಿಕ ಕ್ಷೇತ್ರಗಳಿಗೆ ಬರುವಂತಹ ಯಾತ್ರಾರ್ಥಿಗಳು ದಯಮಾಡಿ ತಮಗರಿವಿಲ್ಲದೇ ಬೆಂಕಿಕಡ್ಡಿ ಗೀರಿ ಎಸೆಯುವುದನ್ನು ಮಾಡದಿರುವಂತೆ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಜಿ.ಗೋಪಾಲ್ ವಿನಂತಿಸಿದ್ದಾರೆ.
ಮನುಷ್ಯರಿಂದ ಕಾಡಿಗೆ ಬೆಂಕಿ ಬೀಳುವ ಸಂದರ್ಭ ಉದ್ದೇಶ ಪೂರ್ವಕ ಆಗಿಯೂ ಇರಬಹುದು ಅಥವಾ ಅಚಾನಕ್ಕಾಗಿ ಆದರೂ ಸಂಭವಿಸಬಹುದು. ಪ್ರವಾಸಿಗರು ಬೆಟ್ಟವನ್ನು ಹತ್ತುವಾಗ ಮಾರ್ಗದ ಮಧ್ಯೆ ಸೇದಿ ಬಿಸಾಕುವ ಬೀಡಿ, ಸಿಗರೇಟು, ಬೆಂಕಿಕಡ್ಡಿ ಗೀರುವುದು ಅದನ್ನು ನಂದಿಸದೇ ತಮಗರಿವಿಲ್ಲದಂತೆ ಬಿಸಾಡುವುದರಿಂದ ಆ ಭಾಗದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಬೆಟ್ಟದಲ್ಲಿರುವ ಒಣಗಿದ ಹುಲ್ಲು ಗಿಡಗೆಂಟೆಗಳಿಗೆ ಬಹುಬೇಗನೆ ಬೆಂಕಿಯುತಾಗಿ ಹೊತ್ತಿಉರಿದು ಬಹುತೇಕ ಭಾಗವನ್ನು ಆವರಿಸಿ ಕಾಳ್ಗಿಚ್ಚು ಸಂಭವಿಸಬಹುದು.
ಇದರ ನಡುವೆ ಆಹಾರ ನೀರು ನೆರಳನ್ನು ಆಶ್ರಯಿಸಿರಬಹುದಾದ ಹಲವಾರು ಸಸ್ತನಿಗಳು, ಪ್ರಾಣಿ ಪಕ್ಷಿಗಳ ಜೀವಕ್ಕೆ ಹಾನಿಯುಂಟಾಗುತ್ತದೆ. ದಯಮಾಡಿ ಇದನ್ನು ಮನದಲ್ಲಿರಿಸಿಕೊಂಡು ಪ್ರಾಣಿ ಪಕ್ಷಿಗಳ ಸಂಕುಲವನ್ನು ಸಂರಕ್ಷಿಸಲು ಸಹೃದಯಿ ನಾಗರೀಕರು ಎಚ್ಚರವಹಿಸಬೇಕೆಂದು ಅವರು ಕೋರಿದ್ದಾರೆ.
ಬೇಸಿಗೆಯ ಬಿರುಬಿಸಿಲಿನಿಂದ ಪ್ರಾಣಿ ಪಕ್ಷಿಗಳು ನೀರು ಆಹಾರ ನೆರಳಿನ ಜೊತೆಗೆ ತಮ್ಮ ಅಸ್ಥಿತ್ವಕ್ಕಾಗಿ ಪರದಾಡುತ್ತಿರುತ್ತವೆ. ನೀರು ಆಹಾರಕ್ಕೆ ಹಪಿಹಪಿಸುವ ಹೊತ್ತಲ್ಲಿ ಬೆಂಕಿ ಅವಘಡದಿಂದ ಹಲವಾರು ಪ್ರಾಣಿಪಕ್ಷಿಗಳು ದಿಢೀರಂತ ಜೀವ ಕಳೆದುಕೊಳ್ಳುವ ಸಾಧ್ಯತೆಯೇ ಹೆಚ್ಚಿರುತ್ತದೆ. ಆದ್ದರಿಂದ ಪ್ರವಾಸಿಗರು ಬೆಟ್ಟವನ್ನು ಹತ್ತುವ ಹಂತದಲ್ಲಿ ಸಾಧ್ಯವಾದರೆ ಆ ಮಾರ್ಗದಲ್ಲಿ ಅಲ್ಲಲ್ಲೇ ಆಹಾರ, ಕುಡಿಯುವ ನೀರನ್ನು ಸಂಗ್ರಹಿಸಿಡಿ. ಬೆಟ್ಟ-ಗಿರಿಧಾಮಗಳಲ್ಲಿ ಗಿಡ ಮರಗಳ ಸಹಿತ ಪ್ರಾಣಿಪಕ್ಷಿಗಳನ್ನುಳಿಸಬೇಕು. ಪರಿಸರವನ್ನು ಸಂರಕ್ಷಿಸಿಕೊಳ್ಳಲು ಆಸಕ್ತಿತಾಳಬೇಕೆಂದು ಸಾರ್ವಜನಿಕರಲ್ಲಿ ಪ್ರಾರ್ಥಿಸಿದ್ದಾರೆ.
ಬೇಸಿಗೆಯ ದಿನಗಳಲ್ಲಿ ಮನುಷ್ಯರಾದ ನಾವು ಅವುಗಳ ಬಗ್ಗೆಯೂ ಯೋಚಿಸಬೇಕು ಸಹಕರಿಸಿ ಉಪಕರಿಸಬೇಕಿದೆ. ಎಲ್ಲರಿಗೂ ತಿಳಿಸಿದಿರುವಂತೆ ಈಗಾಗಲೇ ಹಲವು ಬಗೆಯ ಪಕ್ಷಿಗಳ ಸಂತತಿ ಕ್ಷೀಣಿಸಿದ್ದು ಹಲವಾರು ಪ್ರಾಣಿಪಕ್ಷಿಗಳು ನಶಿಸಿ ಹೋಗುತ್ತಿವೆ. ಈ ಸಂಬಂಧ ತಾಲ್ಲೂಕಿನ ಸಾರ್ವಜನಿಕರಿಗೆ ಕರಪತ್ರಗಳನ್ನು ಹಂಚುವ ಮೂಲಕ ಅರಿವನ್ನುಂಟು ಮಾಡುವ ಮತ್ತು ತಾಲ್ಲೂಕು ಮಟ್ಟದ ಎಲ್ಲ ಅಧಿಕಾರಿಗಳ ಗಮನಸೆಳೆಯುವ ಕಾರ್ಯಕ್ಕೆ ತಾಲ್ಲೂಕು ಮಕ್ಕಳ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಮುಂದಾಗಿದ್ದು ಇದೇ ಫೆಬ್ರವರಿ ತಿಂಗಳ ಕೊನೆಯಿಂದ ಮೇ ಮಾಹೆಯ ಕೊನೆಯವರೆಗೂ ಎಲ್ಲರ ಸಹಕಾರ ಕೋರಿದ್ದು ಮಾನವೀಯ ಕಾರ್ಯಕ್ಕೆ ಮುಂದಾಗಬೇಕೆಂದು ಮನವಿ ಮಾಡಿದ್ದಾರೆ.