ಚನ್ನಪಟ್ಟಣ: ಛಾಪಾಕಾಗದ ವಹಿವಾಟಿನಲ್ಲಿ ನಮ್ಮ ಬ್ಯಾಂಕ್ಇಡೀ ರಾಜ್ಯದಲ್ಲೇ ಮೊದಲ ಸಾಲಿನಲ್ಲಿದೆ. ಬ್ಯಾಂಕ್ ಅಭಿವೃದ್ಧಿಗೆ ಸರ್ವ ಸದಸ್ಯರು ಇನ್ನೂ ಹೆಚ್ಚಿನ ಸಹಕಾರ ನೀಡಬೇಕು ಎಂದು ಅಭ್ಯುದಯ ಮಹಿಳಾ ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷೆ ಕೆ.ಎಸ್.ಸುಮತಧನಂಜಯ ಮನವಿ ಮಾಡಿದರು.
ನಗರದ ಕಾಳಿಕಾಂಭ ದೇವಸ್ಥಾನದ ಬಳಿಯ ವಿಶ್ವಕರ್ಮ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಬ್ಯಾಂಕ್ನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಬ್ಯಾಂಕ್ ಆಡಳಿತ ಪಾರದರ್ಶಕವಾಗಿ ನಡೆದುಕೊಂಡು ಸಾಗುತ್ತಿದೆ. ಬ್ಯಾಂಕ್ನಲ್ಲಿರುವ ಛಾಪಾಕಾಗದ ವಹಿವಾಟಿನಲ್ಲಿ ಇಡೀ ಕರ್ನಾಟಕದಲ್ಲಿ ಮೊದಲ ಸ್ಥಾನದಲ್ಲಿದೆ. ಇದೊಂದು ಹೆಮ್ಮೆಯ ವಿಚಾರ. ಬ್ಯಾಂಕ್ ನ ಸದಸ್ಯರು ಹೊಸ ಷೇರುದಾರರನ್ನು ಮಾಡಿಸುವ ಮೂಲಕ ಬ್ಯಾಂಕ್ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಬೇಕು ಎಂಬ ಕಾರಣಗಳಿಂದ ವಿಜಯಲಕ್ಷ್ಮಿ ರಾಮಣ್ಣನವರು ಸ್ಥಾಪಿಸಿದ ಈ ಬ್ಯಾಂಕ್ ಬೆಳ್ಳಿ ಮಹೋತ್ಸವ ಆಚರಿಸುತ್ತಿರುವುದು ಸಂತಷದ ವಿಚಾರ. ಬ್ಯಾಂಕ್ನಿಂದ ಸಾಲ ಪಡೆದಿರುವ ಸದಸ್ಯರುಗಳು ಸಕಾಲಕ್ಕೆ ಸಾಲವನ್ನು ಮರುಪಾವತಿ ಮಾಡುವ ಮೂಲಕ ಬ್ಯಾಂಕ್ನ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ನಮ್ಮ ಬ್ಯಾಂಕ್ ಮೂಲಕ ಸಾವಿರಾರು ಮಹಿಳೆಯರು: ಸಾಲ ಪಡೆದು ಕಿರು ಉದ್ಯಮಗಳನ್ನು ನಡೆಸುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾರೆ. ಬ್ಯಾಂಕ್ ಸಹ ಅಭಿವೃದ್ಧಿ ಪಥದಲ್ಲಿ ಬೆಳೆದು ಬಂದಿದೆ. ಕೋವಿಂಡ್ ನಿಂದ ಜನತೆ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬ ಕಾರಣದಿಂದ ಈವರೆಗೆ ಸಾಲ ವಸೂಲಾತಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರಲಿಲ್ಲ.
ಆದರೆ, ಮುಂದಿನ ದಿನಗಳಲ್ಲಿ ಸಾಲ ವಸೂಲಾತಿಗೆ ಪ್ರತ್ಯೇಕ ತಂಡ ರಚಿಸಲಾಗುತ್ತದೆ. ಇತರೆ ಜಿಲ್ಲೆಗಳಲ್ಲೂ ಬ್ಯಾಂಕ್ ನ ಶಾಖೆಗಳನ್ನು ತೆರೆಯುವ ಉದ್ದೇಶವಿದೆ. ಕೆಲವೇ ತಿಂಗಳಿನಲ್ಲಿ ಬ್ಯಾಂಕ್ ಚುನಾವಣೆ ನಡೆಯಲಿದ್ದು, ಆಸಕ್ತರು ಚುನಾವಣೆಗೆ ಸ್ಪರ್ಧಿಸುವಂತೆ ಕರೆನೀಡಿದರು.ಗುಂಪು ಸಾಲ ನೀಡಿ: ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರು ಹಲವಾರು ಚರ್ಚೆ ನಡೆಸಿದರು. ಬ್ಯಾಂಕ್ ವತಿಯಿಂದ ಸ್ತ್ರೀ ಶಕ್ತಿ ಸಂಘಗಳಿಗೆ ಗುಂಪುಸಾಲ ನೀಡುವಂತೆ ಸದಸ್ಯರು ಮನವಿ ಮಾಡಿದರು.
ಇದೇವೇಳೆ ಬ್ಯಾಂಕ್ ನ ಸಂಸ್ಥಾಪಕ ಅಧ್ಯಕ್ಷರಾದ ವಿಜಯಲಕ್ಷ್ಮಿ ರಾಮಣ್ಣನವರ ಗುಣಗಾನ ಮಾಡಿದ ಸದಸ್ಯರು, ಬೆಳ್ಳಿಮಹೋತ್ಸವ ಸಮಯದಲ್ಲಿ ಅವರು ಬ್ಯಾಂಕ್ ಆಡಳಿತ ಮಂಡಳಿಯಲ್ಲಿ ಇಲ್ಲದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ಅವರನ್ನು ನಡೆಸಿಕೊಂಡ ರೀತಿಯ ಬಗ್ಗೆ ಒಕ್ಕೊರಲಿನಿಂದ ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ನಿರ್ದೇಶಕರಾದ ಸುನಂದಮ್ಮ ವರದೇಗೌಡ, ಜಯಮ್ಮ ಜಯರಾಮು, ರೇಖಾ ಉಮಾಶಂಕರ್, ಇಂದುಮತಿ ಸಿದ್ದೇಗೌಡ, ಶಶಿಕಲಾ ಕೃಷ್ಣಪ್ಪ, ಜಯಮಾಲ ಮಹಾಲಿಂಗು, ಆಶಾನಾಗೇಶ್, ಪುಷ್ಪಲತಾ ರವಿಕುಮಾರ್, ಗೌರಮ್ಮ ಶಿವಣ್ಣ, ನಿಂಗರಾಜಮ್ಮ ಲಕ್ಷ್ಮಿಪತಿ ಸೇರಿದಂತೆ ಬ್ಯಾಂಕ್ ಸಿಬ್ಬಂದಿ ಉಪಸ್ಥಿತರಿದ್ದರು.