ಬೆಂಗಳೂರು: ವಿಶ್ವವಿಖ್ಯಾತ ಧಾರ್ಮಿಕ ಕ್ಷೇತ್ರದಲ್ಲಿ ತಿರುಪತಿ ತಿರುಮಲ ಲಡ್ಡು ತಯಾರಿಕಾ ವಿವಾದದ ಪ್ರಕರಣ ಇದೀಗ ಸುಪ್ರಿಂಕೋರ್ಟ್ ಮೆಟ್ಟಿಲೇರಿದೆ.
ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬು ಬಳಸಲಾಗುತ್ತಿತ್ತು ಎಂಬ ಪ್ರಕರಣ ಪ್ರಶ್ನಿಸಿ ಸುರೇಶ್ ಎಂಬುವರು ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಪ್ರಾಣಿಗಳ ಕೊಬ್ಬು ಲಡ್ಡು ತಯಾರಿಕೆಗೆ ಬಳಸಲಾಗುತ್ತಿತ್ತು ಎಂಬ ಆರೋಪದಿಂದಾಗಿ ಭಕ್ತರ ಭಾವನೆ ಧಕ್ಕೆಯಾಗಿದೆ.
ಅವರ ಧಾರ್ಮಿಕ ಹಕ್ಕುಗಳಿಗೆ ಚ್ಯುತಿಯಾಗಿದೆ. ಈ ಪ್ರಕರಣವನ್ನು ನ್ಯಾಯಾಧೀಶರ ಅಥವಾ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಮತ್ತೊಂದೆಡೆ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಕಲಬೆರಕೆ ಹಿನ್ನೆಲೆ ಭಕ್ತರಲ್ಲಿ ನಂಬಿಕೆ ಮೂಡಿಸುವ ಸಲುವಾಗಿ ಹೋಮ ಹವನ ಆಯೋಜನೆ ಮಾಡಲಾಗಿದೆ.
ಆಗಮ ಶಾಸ್ತ್ರಜ್ಞರ ಸಲಹೆ ಮೇರೆಗೆ ಈ ಶಾಂತಿ ಹೋಮ ಆಯೋಜನೆ ಮಾಡಲಾಗಿದ್ದು, ಸಿಎಂ ಚಂದ್ರಬಾಬು ನಾಯ್ಡು ಕೂಡ ಇದೇ ಸಲಹೆಯನ್ನ ನೀಡಿದ್ದರು ಎನ್ನಲಾಗಿದೆ.ತಿರುಮಲದ ಅರ್ಚಕ ರಾಮಕೃಷ್ಣ ದೀಕ್ಷಿತ್ ಅವರ ನೇತೃತ್ವದಲ್ಲಿ ಇಂದು ಬೆಳಗ್ಗೆ 6 ರಿಂದ 10 ಗಂಟೆವರೆಗೆ ಶಾಂತಿ ಹೋಮ ನಡೆದಿದೆ.
ದೇವಾಲಯದ ಬಳಿ ಇರುವ ಬಂಗಾರ ಬಾವಿ ಯಾಗ ಶಾಲೆಯಲ್ಲಿ ಈ ಶಾಂತಿ ಹೋಮ ನಡೆದಿದ್ದು, ಮೂರು ಹೋಮ ಕುಂಡಗಳನ್ನು ರಚಿಸಿ ಹೋಮ ನಡೆಸಲಾಗಿದೆ.
ವಾಸ್ತು ಕುಂಡ, ಸಭ್ಯಂ ಹೋಮ ಕುಂಡ, ಪೌಣರಿಕಂ ಹೋಮ ಕುಂಡ ಎಂಬ ಮೂರು ಹೋಮ ಕುಂಡಗಳು ರಚನೆ ಮಾಡಲಾಗಿತ್ತು.ಭಕ್ತರ ಅತಂಕ ಗೊಂದಲ ನಿವಾರಿಸಲು ಈ ಹೋಮ ಮಾಡುತ್ತಿರುವುದಾಗಿ ಟಿಟಿಡಿ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.ಹೀಗಾಗಲೇ ಪವಿತ್ರೋತ್ಸವವನ್ನು ನಡೆಸಲಾಗಿತ್ತು. ಆಗಸ್ಟ್ 15 ರಿಂದ 17ರ ವರೆಗೆ ಮೂರು ದಿನ ಪವಿತ್ರೋತ್ಸವ ನಡೆಸಲಾಗಿತ್ತು. ಆಕ್ಟೋಬರ್ 4 ರಿಂದ 12 ರ ವರೆಗೆ ತಿರುಮಲದಲ್ಲಿ ನಡೆಯಲಿರುವ ಬ್ರಹ್ಮೋತ್ಸವಕ್ಕೂ ಸಕಲ ಸಿದ್ದತೆ ನಡೆದಿದೆ.