ಬೆಂಗಳೂರು: ರಾಜ್ಯದಲ್ಲಿ ಎರಡು ಹ್ಯೂಮನ್ ಮೆಟಾನ್ಯೂಮೊವೈರಸ್ (ಎಚ್ಎಂಪಿವಿ) ಪ್ರಕರಣಗಳು ಪತ್ತೆಯಾಗಿರುವುದು ಜನರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ, ಭಯಪಡುವ ಅಗತ್ಯವಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಜನರು ಭಯಭೀತರಾಗಬೇಡಿ, ಏಕೆಂದರೆ ಈ ವೈರಸ್ ಕೋವಿಡ್-19 ರಂತೆ ಹರಡುವುದಿಲ್ಲ ಎಂದು ಸೋಮವಾರ ರಾಜ್ಯ ಸರ್ಕಾರ ತಿಳಿಸಿದೆ.
ಈ ಕುರಿತು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ (ಡಿಎಂಇ) ಪ್ರಕಟಣೆ ನೀಡಿದ್ದು, ಈ ವೈರಸ್ ಪ್ರಾಥಮಿಕವಾಗಿ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ನೆಗಡಿಯಂತೆಯೇ ಸೋಂಕುಗಳನ್ನು ಉಂಟುಮಾಡುತ್ತದೆ ಎಂದು ಒತ್ತಿಹೇಳಿದೆ. ಅಲ್ಲದೆ, ಇನ್ಫ್ಲುಯೆನ್ಜಾ ತರಹದ ಅನಾರೋಗ್ಯ (ಐಎಲ್ಐ) ಮತ್ತು ತೀವ್ರತರವಾದ ಉಸಿರಾಟದ ಸೋಂಕು (ಎಸ್ಎಆರ್ಐ) ಪ್ರಕರಣಗಳು ಕಂಡುಬಂದರೆ ವರದಿ ಮಾಡುವಂತೆ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದೆ.
ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಪ್ರಕಾರ, HMP ವೈರಸ್ ಕೆಮ್ಮು, ಜ್ವರ, ಮೂಗು ಕಟ್ಟಿಕೊಳ್ಳುವುದು ಮತ್ತು ಉಸಿರಾಟದ ತೊಂದರೆ ಸೇರಿದಂತೆ ಫ್ಲೂ ತರಹದ ಲಕ್ಷಣಗಳನ್ನು ಉಂಟುಮಾಡುತ್ತದೆ. ಗಂಭೀರ ಪ್ರಕರಣಗಳಲ್ಲಿ ಇದು ಬ್ರಾಂಕೈಟಿಸ್ ಅಥವಾ ನ್ಯುಮೋನಿಯಾಕ್ಕೆ ಕಾರಣವಾಗಬಹುದು. ವಿಶೇಷವಾಗಿ ಚಿಕ್ಕ ಮಕ್ಕಳು, ವೃದ್ಧರು ಮತ್ತು ರೋಗನಿರೋಧಕ ಶಕ್ತಿಯನ್ನು ಹೊಂದಿರದ ವ್ಯಕ್ತಿಗಳಲ್ಲಿ ಕಂಡುಬರುತ್ತದೆ.
ಎಚ್ಎಂಪಿ ವೈರಸ್ ಉಸಿರಾಟದ ಡ್ರಾಪ್ಲೆಟ್ಸ್, ನಿಕಟ ಸಂಪರ್ಕ ಮತ್ತು ವೈರಸ್ನಿಂದ ಕಲುಷಿತಗೊಂಡ ಮೇಲ್ಮೈಗಳನ್ನು ಸ್ಪರ್ಶಿಸುವುದು ಮತ್ತು ನಂತರ ಬಾಯಿ, ಮೂಗು ಅಥವಾ ಕಣ್ಣುಗಳನ್ನು ಮುಟ್ಟಿಕೊಳ್ಳುವುದರಿಂದ ಹರಡುತ್ತದೆ ಎಂದು ಅದು ಹೇಳಿದೆ.
HMPV ಗೆ ಯಾವುದೇ ನಿರ್ದಿಷ್ಟ ಆಂಟಿವೈರಲ್ ಚಿಕಿತ್ಸೆ ಅಥವಾ ಲಸಿಕೆ ಇಲ್ಲ. ಸೋಂಕು ತಗುಲಿದವರ ಚಿಕಿತ್ಸೆಯಲ್ಲಿ ವಿಶ್ರಾಂತಿ, ಹೆಚ್ಚಿನ ನೀರು ಕುಡಿಯುವುದು ಮತ್ತು ನೋವು, ಜ್ವರ ಮತ್ತು ಮೂಗು ಕಟ್ಟಿಕೊಳ್ಳುವಿಕೆಗಾಗಿ ತೆಗೆದುಕೊಳ್ಳುವ ಔಷಧಿಗಳನ್ನೇ ರೋಗಲಕ್ಷಣಗಳನ್ನು ನಿವಾರಿಸಲು ಬಳಸಲಾಗುತ್ತದೆ. ಕೆಲವು ಗಂಭೀರ ಪ್ರಕರಣಗಳಲ್ಲಿ ಆಕ್ಸಿಜನ್ ಥೆರಪಿ ಅಥವಾ ಐವಿ ದ್ರಾವಣಗಳಿಗಾಗಿ ಆಸ್ಪತ್ರೆಗೆ ತೆರಳ ಬೇಕಾಗಬಹುದು ಎಂದಿದೆ.
ವೈರಸ್ ಹಡುವಿಕೆಯನ್ನು ತಡೆಯಲು ಏನು ಮಾಡಬೇಕು: ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಬೇಕು. ಆಗಾಗ್ಗೆ ಕೈಗಳನ್ನು ಸಾಬೂನಿನಿಂದ ತೊಳೆಯಬೇಕು. ಜ್ವರ, ಕೆಮ್ಮು ಮತ್ತು ಸೀನುವಿಕೆ ಇದ್ದಲ್ಲಿ ಸಾರ್ವಜನಿಕ ಸ್ಥಳಗಳಿಂದ ದೂರವಿರಬೇಕು. ಅನಾರೋಗ್ಯ ಪೀಡಿತ ವ್ಯಕ್ತಿಗಳೊಂದಿಗಿನ ನಿಕಟ ಸಂಪರ್ಕದಿಂದ ದೂರವಿರಬೇಕು.
ವೈರಸ್ ಹರಡುವಿಕೆ ತಡೆಯಲು ಏನು ಮಾಡಬಾರದು: ಟಿಶ್ಯೂ ಪೇಪರ್ಗಳು ಅಥವಾ ಕರವಸ್ತ್ರಗಳನ್ನು ಮರುಬಳಕೆ ಮಾಡಬೇಡಿ. ಟವೆಲ್ ಮತ್ತು ಲಿನಿನ್ ಬಟ್ಟೆಯನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬೇಡಿ. ಕಣ್ಣು, ಮೂಗು ಮತ್ತು ಬಾಯಿಯನ್ನು ಸ್ಪರ್ಶಿಸಬೇಡಿ.