ರಚಿನ್ ರವೀಂದ್ರ ನ್ಯೂಜಿಲೆಂಡ್ ತಂಡದ ಭರವಸೆಯ ಯುವ ಆಲ್ರೌಂಡರ್. ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿದಿರುವ ರಚಿನ್ ಇದೇ ಮೊದಲ ಬಾರಿಗೆ ಭಾರತದ ವಿರುದ್ಧ ಟೆಸ್ಟ್ ಪಂದ್ಯವಾಡಲು ಆಗಮಿಸಿದ್ದಾರೆ. ಅದರಲ್ಲೂ ತಂದೆ ತವರು ಬೆಂಗಳೂರಿನಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವಾಡಲು ಉತ್ಸುಕರಾಗಿದ್ದಾರೆ.
ನಡುವಣ ಮೂರು ಪಂದ್ಯಗಳ ಟೆಸ್ಟ್ ಸರಣಿಯು ಬುಧವಾರದಿಂದ (ಅ.16) ಶುರುವಾಗಲಿದೆ. ಈ ಸರಣಿಗೆ ಆಯ್ಕೆಯಾಗಿರುವ ನ್ಯೂಝಿಲೆಂಡ್ ಬಳಗದಲ್ಲಿ ಭಾರತೀಯ ಮೂಲದ ರಚಿನ್ ರವೀಂದ್ರ ಕೂಡ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಮೊದಲ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಕಣಕ್ಕಿಳಿಯಲು ರಚಿನ್ ಉತ್ಸುಕರಾಗಿದ್ದಾರೆ. ಏಕೆಂದರೆ ರಚಿನ್ ರವೀಂದ್ರ ಮೂಲತಃ ಕರ್ನಾಟಕದವರು.
ಹೀಗಾಗಿಯೇ ತಂದೆಯ ತವರು ಬೆಂಗಳೂರಿನಲ್ಲಿ ಕಣಕ್ಕಿಳಿಯಲು ಯುವ ಆಲ್ರೌಂಡರ್ ಕಾತುರರಾಗಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಚಿನ್ ರವೀಂದ್ರ, ನನ್ನ ಭಾರತೀಯ ಮೂಲದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಬೆಂಗಳೂರು ನನ್ನ ಕುಟುಂಬಸ್ಥರು ನೆಲೆಸಿರುವ ಸ್ಥಳ. ಇಲ್ಲಿ ಆಡಲು ಸಾಧ್ಯವಾಗುವುದು ನನ್ನ ಪಾಲಿಗೆ ವಿಶೇಷ ಕ್ಷಣ. ನಾನು ಬೆಂಗಳೂರಿನಲ್ಲಿ ಕಣಕ್ಕಿಳಿಯುವುದನ್ನು ನನ್ನ ತಂದೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕೂತು ನೋಡಲಿದ್ದಾರೆ. ಹೀಗಾಗಿ ಮೊದಲ ಟೆಸ್ಟ್ ಪಂದ್ಯವು ನನ್ನ ಪಾಲಿಗೆ ಅಸ್ಮರಣೀಯ ಎಂದು ರಚಿನ್ ರವೀಂದ್ರ ಹೇಳಿದ್ದಾರೆ.