ಪುಸ್ತಕದ ಹೆಸರನ್ನು ನೋಡಿದಾಗಲೇ ಏನೋ ಒಂದು ಕುತೂಹಲ ಮೂಡಿತ್ತು. “ಮಿಸ್ಟರ್” ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಪದ. ಆದರೆ ಅದರ ಮುಂದಿದ್ದ ಇಂಗ್ಲಿಷ್ ವರ್ಣಮಾಲೆಯ ಮೊದಲ ಅಕ್ಷರವಾದ ‘ಎ’ ಎಂಬುದರ ಅರ್ಥವೇನು, ಈ ‘ಎ’ ಏನನ್ನು ಸೂಚಿಸುತ್ತದೆ ಎಂದು ಹಲವಾರು ಪ್ರಶ್ನೆಗಳು ಮುಖ ಪುಟವನ್ನು ನೋಡುತ್ತಲೇ ಸುಳಿದವು.
ಒಳಗೇನಿದೆ ಎಂಬ ತಿಳಿದುಕೊಳ್ಳುವ ಆತುರತೆಯಲ್ಲಿ ಓದಲು ಪ್ರಾರಂಭ ಮಾಡಿದರೆ ಕತೆ ಆರಂಭವಾಗುವ ಮೊದಲೆ ಕಥಾ ನಾಯಕನ ಅಂತ್ಯ! ಎಂದು ಓದಿ ಆಶ್ಚರ್ಯವಾಗಿತ್ತು! ಮುಂದೆ ಏನು ಎಂಬ ಸಂಶಯ ಸುಳಿಯಿತು. ಒಮ್ಮೆಗೆ ಈ ಕತೆ ಎಲ್ಲಿ ಸಾಗುತ್ತಿದೆ ಎಂದು ಗೊಂದಲ ಸೃಷ್ಟಿ ಆಯಿತು. ಒಂದೊಂದು ಪುಟ ಓದಿದ ಹಾಗೆ ಮುಂದೇನು ಎಂದು ಆಸಕ್ತಿ ಬೆಳೆಯುತ್ತಲೇ ಹೋಯಿತು. ಎಲ್ಲಾ ಅಧ್ಯಾಯಗಳು ಸಹ ಒಂದಲ್ಲ ಒಂದು ತೆರದಲ್ಲಿ ಪ್ರಚಲಿತ ಹಾಗೂ ಮುಂದೆ ಎದುರಾಗುವ ಭಯಾನಕ ವಿದ್ಯಮಾನಗಳ ಕುರಿತು ಬೆಳಕು ಚೆಲ್ಲುತ್ತವೆ. ಕಥಾಹಂದರ ಒಂದೇ ವಿಷಯಕ್ಕೆ ಸೀಮಿತವಾಗಿಲ್ಲ, ಎಲ್ಲಾ ಕ್ಷೇತ್ರಗಳತ್ತ ಕೂಡ ನಮ್ಮ ನೋಟವನ್ನು ಹೊರಳಿಸುತ್ತದೆ.
ವಿಷೇಶವೆಂದರೆ ಇಲ್ಲಿ ಕಥಾನಾಯಕನು ತನ್ನ ವಿಭಿನ್ನ ಕನಸುಗಳ ಮೂಲಕ ನಮ್ಮನ್ನು ಬೇರೆ ಜಗತ್ತಿಗೆ ಕರೆದೊಯ್ಯುವ ಯತ್ನವನ್ನು ಮಾಡುತ್ತಾನೆ ಹಾಗೂ ಆ ಕಾರ್ಯದಲ್ಲಿ ಸಫಲನಾಗುತ್ತಾನೆ. ಕುಳಿತು ಓದುತ್ತಿರುವಾಗ ಬೇರೊಂದು ಲೋಕದಲ್ಲಿದ್ದೇವೆ ಎಂದು ಭಾಸವಾದರೂ ಲೇಖಕರು ವಿಶ್ಲೇಷಿಸಿರುವ ಸಂಗತಿಗಳು ಇದು ನಮ್ಮದೇ ಭವಿಷ್ಯ ಎಂದು ಎಚ್ಚರಿಸುತ್ತಲೇ ಇರುತ್ತವೆ. ಆತನ ಭಯಾನಕ, ಆಶ್ಚರ್ಯಕರ ಕನಸುಗಳ ಬೆನ್ನು ಹತ್ತಿ ಹೋಗುವ ಸಾಹಸದಲ್ಲಿ ಲೇಖಕರು ನಮ್ಮನ್ನು ಮಗ್ನರಾಗುವಂತೆ ಮಾಡಿದ್ದಾರೆ.
ಕತೆ ಒಂದೇ ತರ ಸಾಗುವುದಿಲ್ಲ, ಮಧ್ಯ ಮಧ್ಯ ಸ್ವರಚಿತ ಕವನಗಳನ್ನು , ಕಗ್ಗವನ್ನು, ವಚನಗಳನ್ನು ಬರಹಗಾರರು ಸೇರಿಸಿದ್ದಾರೆ. ಇದು ಏನು ಹೇಗೆ ಈ ಕತೆಗೆ ಯಾವ ತೆರದಲ್ಲಿ ಬೆಸೆಯುತ್ತದೆ ಎಂದು ಅರ್ಥ ಮಾಡಿಕೊಳ್ಳುವ ಕಾರ್ಯವನ್ನು ಲೇಖಕರು ನಮಗೆ ಬಿಟ್ಟಿದ್ದಾರೆ. ಓದುತ್ತಾ ಸಾಗುವಾಗ ಒಂದು ನಿಮಿಷ ಸಹ ಬೇಸರ ಎನಿಸದ ಹಾಗೆ ಬರಹಗಾರರು ಸಾಲುಗಳನ್ನು ಪೋಣಿಸಿದ್ದಾರೆ. ನೀರಿನ ಹಾಹಾಕಾರ ಈಗಲೇ ಶುರುವಾಗಿದೆ, ಅದರ ಭೀಕರತೆ ಮುಂದೆ ಹೇಗಿರಬಹುದು ಎಂಬುದನ್ನು ಒಂದು ಉದಾಹರಣೆಯ ಮೂಲಕ ಅಚ್ಚರಿ ಪಡುವಂತೆ ಕಟ್ಟಿಕೊಟ್ಟಿದ್ದಾರೆ.
ಹೀಗೆ ಲಿಂಗ ತಾರತಮ್ಯದಿಂದ ಹೆಣ್ಣಿನ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿ ಎಂತಹ ಸಂದರ್ಭ ನಿರ್ಮಾಣವಾಗಬಹುದು, ಇಂದಿನಂತೆ ಸಾಗಿದರೆ ನಮ್ಮ ಜೀವನುಡಿ ಕನ್ನಡ ಭಾಷೆಯ ಮುಂದಿನ ಪರಿಸ್ಥಿತಿ ಏನಿರ ಬಹುದು , ಆಸ್ಪತ್ರೆಯಲ್ಲಿ ನಡೆಯುವ ಅವ್ಯವಹಾರಗಳು , ಮೋಸವೇ ತುಂಬಿರುವ ಸಾಗರದಲ್ಲಿ ಸತ್ಯ ಹೊರ ಎಳೆಯಲು ಧುಮುಕಿದವರ ನಾಪತ್ತೆ, ಅತ್ಯಾಚಾರ, ಕಾನೂನಿನ ದುರುಪಯೋಗ, ಎಲ್ಲಾ ಜೀವರಾಶಿಗಳಿಗೂ ಭೂಮಿಯ ಮೇಲೆ ಸಮಾನ ಅಧಿಕಾರವಿದ್ದರೂ ಅಟ್ಟಹಾಸದಿಂದ ಮೆರೆಯುತ್ತಿರುವ ಮಾನವನಿಗೆ ಪ್ರಕೃತಿ ಹೇಗೆ ಸವಾಲೊಡ್ಡಿ ನಿಲ್ಲಬಹುದೆಂದು,ಹಾಗೂ ವಿಜ್ಞಾನದ , ಜೈವಿಕ ತಂತ್ರಜ್ಞಾನದ ವಿಸ್ಮಯ ಸಂಗತಿಗಳನ್ನು ಹೀಗೆ ಸಾಕಷ್ಟು ವಿಷಯಗಳನ್ನು ವಿಭಿನ್ನ ರೀತಿಯಲ್ಲಿ ಲೇಖಕರು ತೋರಿಸಿಕೊಟ್ಟಿದ್ದಾರೆ .
ಪುಸ್ತಕ ಓದುತ್ತಾ ಹೋದಂತೆ ಒಂದು ಚಲನ ಚಿತ್ರವನ್ನು ನೋಡುತ್ತಿರುವ ಅನುಭವವಾಗುತ್ತದೆ. ನನ್ನ ತಲೆಯಲ್ಲಿ ಅಧ್ಬುತ ಚಿತ್ರಣಗಳನ್ನು ಮೂಡಿಸುವಲ್ಲಿ ಪುಸ್ತಕವು ಯಶಸ್ವಿಯಾಗಿದೆ.
ಕೊನೆಯಲ್ಲಿ ಎಲ್ಲ ಮುಗಿದು ಹೋಯ್ತು ಎನ್ನುವಾಗ ಎದುರಾದ ಊಹಿಸಲಾಗದ ರೋಚಕ ತಿರುವು ಇನ್ನಷ್ಟು ಕುತೂಹಲಕ್ಕೆ, ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಿದೆ.’ ಭಾರತ ಎಂದಿಗೂ ಕೇಳಿರದೆ ಕಥೆ’ ಎಂದು ಇದ್ದ ಅಡಿ ಸಾಲು ನಿಜವೆನಿಸಿತು, ಅಷ್ಟು ಹೊಸದಾಗಿ ವಿಭಿನ್ನವಾಗಿ ಕತೆ ನಿರೂಪಿತಗೊಂಡಿದೆ.’ಮಿಸ್ಟರ್ ಎ’ ಪ್ರಪಂಚದೊಳಗೆ ಇಣುಕಲು ಇದೊಂದು ಚಿಕ್ಕ ಕಿಟಕಿ. ಆ ಲೋಕದೊಳಗೆ ಪ್ರವೇಶಿಸಬೇಕೆಂದರೆ ಪುಸ್ತಕದ ಪುಟಗಳ ತೆರೆಯಲೇ ಬೇಕು ಪದಗಳ ಮನಸಿಟ್ಟು ಓದಲೇಬೇಕು.