ಚೆನ್ನೈ: ಭಾರೀ ಮಳೆಯಿಂದಾಗಿ ತಮಿಳುನಾಡಿನಾದ್ಯಂತ ಹಲವೆಡೆ ಟ್ರಾಫಿಕ್ ಜಾಮ್ ಆಗಿದ್ದು, ಏರಿಯಾಗಳು ಜಲಾವೃತವಾಗಿದೆ. ಚೆನ್ನೈ ಹವಾಮಾನ ಇಲಾಖೆ ಮಂಗಳವಾರ ಚೆಂಗಲ್ಪಟ್ಟು, ವಿಲ್ಲುಪುರಂ ಮತ್ತು ಕಡಲೂರು ಜಿಲ್ಲೆಗಳಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಉತ್ತರ ತಮಿಳುನಾಡು ಮತ್ತು ದಕ್ಷಿಣ ಆಂಧ್ರಪ್ರದೇಶದ ಕರಾವಳಿಯತ್ತ ಚಲಿಸುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಮಳೆ ಹೆಚ್ಚಾಗಿದೆ. ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ನಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಭಾರೀ ಮಳೆಯ ಕಾರಣದಿಂದ ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ಇಂದು ಜನವಸತಿ ಪ್ರದೇಶಗಳಲ್ಲಿ ಜಲಾವೃತವಾಗಿದ್ದು, ಟ್ರಾಫಿಕ್ ಜಾಮ್ ಉಂಟಾಗಿದೆ. ಸ್ಥಳೀಯ ಆಡಳಿತವು ಪಂಪ್ ಮೂಲಕ ಮಳೆನೀರನ್ನು ಹೊರತೆಗೆಯಲು ಪ್ರಯತ್ನಿಸುತ್ತಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಇಂದು ಮತ್ತು ನಾಳೆ ತೂತುಕುಡಿಯಲ್ಲಿ ಸ್ವಲ್ಪ ಮಳೆಯಾಗುವ ಸಾಧ್ಯತೆಯಿದೆ.
ಕರಾವಳಿ ಜಿಲ್ಲೆಯಲ್ಲಿ ಡಿಸೆಂಬರ್ 25ರಂದು ಲಘು ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ರಾಮನಾಥಪುರಂ ಜಿಲ್ಲೆಯಲ್ಲಿ ಡಿಸೆಂಬರ್ 24 ಮತ್ತು 25ರಂದು ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಒಂದು ವಾರದ ಹಿಂದೆ, ತಮಿಳುನಾಡು ರಾಜ್ಯದ ಕೆಲವು ಭಾಗಗಳಲ್ಲಿ ಭಾರೀ ಮಳೆಯು ಮುಂದುವರಿದ ಕಾರಣದಿಂದ ಕರಾವಳಿ ಜಿಲ್ಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಹಲವಾರು ಭಾಗಗಳು ತೀವ್ರ ಜಲಾವೃತಕ್ಕೆ ಸಾಕ್ಷಿಯಾಗಿದ್ದವು. ಪೋಸ್ಟಲ್ ಟೆಲಿಗ್ರಾಂ ಕಾಲೋನಿ, ರಾಜೀವ್ ನಗರ, ರಾಜಗೋಪಾಲ್ ನಗರ, ಭಾರತಿ ನಗರ, ಅಮುದಾ ನಗರ, ಕೆವಿಕೆ ನಗರ ಮತ್ತು ತೂತುಕುಡಿಯ ಅಶೋಕ ನಗರ ಸೇರಿದಂತೆ ಪ್ರದೇಶಗಳಲ್ಲಿ ಜಲಾವೃತವಾಗಿರುವ ದೃಶ್ಯಗಳು ಕಂಡುಬಂದಿವೆ.
ಇದಕ್ಕೂ ಮುನ್ನ ಶುಕ್ರವಾರ ತೂತುಕುಡಿ ಮತ್ತು ಇತರ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗಿದ್ದರೆ, ತಿರುಚ್ಚಿಯಲ್ಲಿ ಎಡೆಬಿಡದೆ ಮಳೆಯಾಗಿದೆ. ಒಂದು ವಾರದ ಹಿಂದೆ, ಗುರುವಾರ ಭಾರೀ ಮಳೆಯ ನಿರೀಕ್ಷೆಯಲ್ಲಿ ತಮಿಳುನಾಡಿನ 11 ಜಿಲ್ಲೆಗಳಲ್ಲಿ ಎಲ್ಲಾ ಶಾಲೆಗಳನ್ನು ಮುಚ್ಚಲಾಗಿತ್ತು. ಚೆನ್ನೈ, ವಿಲ್ಲುಪುರಂ, ತಂಜಾವೂರು, ಮೈಲಾಡುತುರೈ, ಪುದುಕೊಟ್ಟೈ, ಕಡಲೂರು, ದಿಂಡಿಗಲ್, ರಾಮನಾಥಪುರಂ, ತಿರುವರೂರ್, ರಾಣಿಪೇಟ್ ಮತ್ತು ತಿರುವಳ್ಳೂರು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.