ಬಿಕಾನೇರ್: ಕಳೆದ ಕೆಲದಿನಗಳಿಂದ ರಾಜಸ್ತಾನದಲ್ಲಿ ಅಪಘಾತಗಳ ಸರಣಿಯೇ ನಡೆಯುತ್ತಿದ್ದು, ನಿನ್ನೆ ಗ್ಯಾಸ್ ಟ್ಯಾಂಕರ್ ಸ್ಫೋಟ ಬೆನ್ನಲ್ಲೇ ಇದೀಗ ಕಾರೊಂದು ಭೀಕರವಾಗಿ ಅಪಘಾತಕ್ಕೀಡಾದ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ರಾಜಸ್ಥಾನದ ನಾಗೌರ್ನಲ್ಲಿ ಶುಕ್ರವಾರ ರಾತ್ರಿ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರೊಂದು ಬರೊಬ್ಬರಿ ಎಂಟು ಬಾರಿ ಪಲ್ಟಿಯಾಗಿದೆ. ಅಚ್ಚರಿ ಎಂದರೆ ಇಷ್ಟು ಭೀಕರ ಅಪಘಾತದ ಹೊರತಾಗಿಯೂ ಕಾರಿನಲ್ಲಿದ್ದ ಐದು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನೂ ಅಚ್ಚರಿ ಎಂದರೆ ಅಪಘಾತದ ಬಳಿಕ ಕಾರಿನ ಚಾಲಕ ಹೊರಬಂದು ಟೀ ಕುಡಿಯೋಣ ಬನ್ನಿ ಎಂದು ಹೇಳಿದ್ದಾನೆ.
ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಐದು ಜನರನ್ನು ಹೊತ್ತೊಯ್ಯುತ್ತಿದ್ದ ಎಸ್ಯುವಿ ಕಾರು ಹೆದ್ದಾರಿಯಲ್ಲಿ ವೇಗವಾಗಿ ಚಲಿಸುತ್ತಿರುವುದನ್ನು ತೋರಿಸುತ್ತದೆ. ಕಾರಿನ ಚಾಲಕ ತಿರುವು ತೆಗೆದುಕೊಳ್ಳುತ್ತಿದ್ದಂತೆ ನಿಯಂತ್ರಣ ಕಳೆದುಕೊಂಡ ಕಾರು ಕೆಲವೇ ಸೆಕೆಂಡುಗಳಲ್ಲಿ ಕನಿಷ್ಠ ಎಂಟು ಬಾರಿ ಪಲ್ಟಿಯಾಗಿ ಶೋ ರೂಂ ಮುಂದೆ ತಲೆಕೆಳಗಾಗಿ ಬಿದ್ದಿದೆ. ಕಾರು ಕಂಪನಿಯ ಮುಖ್ಯ ದ್ವಾರಕ್ಕೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಅದು ಮುರಿದು ಬಿದ್ದಿರುವುದು ದೃಶ್ಯಗಳಲ್ಲಿ ಕಾಣಸಿಗುತ್ತದೆ.
ಅಪಘಾತ ಎಷ್ಟು ಪ್ರಬಲವಾಗಿತ್ತೆಂದರೆ ವಾಹನವು ಸಂಪೂರ್ಣವಾಗಿ ನಜ್ಜುಗುಜ್ಜಾಗಿತ್ತು. ಆದರೆ ಇಷ್ಟು ದೊಡ್ಡ ಅಪಘಾತದಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ. ಚಾಲಕ ಮೊದಲು ಕಾರು ಪಲ್ಟಿಯಾಗುತ್ತಿದ್ದಾಗ ಅದರಿಂದ ಜಿಗಿದ. ಕಾರು ಶೋ ರೂಂ ಮುಂದೆ ಇಳಿದ ನಂತರ ಉಳಿದ ನಾಲ್ವರು ಪ್ರಯಾಣಿಕರು ಹೊರಬಂದರು. ತಮಾಷೆ ಎಂಬಂತೆ ಅವರು ಶೋ ರೂಂ ಒಳಗೆ ಹೋಗಿ, “ಹುಮೇ ಚಾಯ್ ಪಿಲಾ ದೋ” (ದಯವಿಟ್ಟು ನಮಗೆ ಚಹಾ ಕೊಡಿ) ಎಂದು ಕೇಳಿದ್ದಾರೆ.
ಈ ಅಪಘಾತದಲ್ಲಿ “ಯಾರಿಗೂ ಗಾಯವಾಗಿಲ್ಲ. ಒಂದೇ ಒಂದು ಗೀರು ಕೂಡ ಯಾರಿಗೂ ಬಿದ್ದಿಲ್ಲ. ಅವರು ಒಳಗೆ ಬಂದ ತಕ್ಷಣ, ಚಹಾ ಕೇಳಿದರು” ಎಂದು ಕಾರು ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಯಾಣಿಕರು ನಾಗೌರ್ ನಿಂದ ಬಿಕಾನೇರ್ ಗೆ ಪ್ರಯಾಣಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.