ನವದೆಹಲಿ: ಇಸ್ಲಾಮಿಕ್ ಬಂಡುಕೋರರು ಹಾಗೂ ಸಿರಿಯಾ ಸರ್ಕಾರದ ವಿರುದ್ಧದ ಅಂತರ್ಯುದ್ಧ ತಾರಕಕ್ಕೇರಿದ್ದು, ಇದರ ಪರಿಣಾಮ ಸಿರಿಯಾದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಇದೀಗ ಸಿರಿಯಾದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಭಾರತೀಯ ವಿದೇಶಾಂಗ ಸಚಿವಾಲಯ ಡಿಸೆಂಬರ್ 6ರ ಮಧ್ಯರಾತ್ರಿ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಸಿರಿಯಾಗೆ ಅಥವಾ ಸಿರಿಯಾ ಮೂಲಕ ಯಾರೂ ಪ್ರಯಾಣಿಸಬೇಡಿ ಎಂದು ಎಚ್ಚರಿಸಿದೆ.
ಜೊತೆಗೆ ಸಿರಿಯಾಲ್ಲಿರುವ ಭಾರತೀಯ ನಾಗರೀಕರು ಈ ತಕ್ಷಣವೇ ಹೊರಟುಬರಲು ಸೂಚಿಸಿದೆ. ಲಭ್ಯವಿರುವ ವಾಣಿಜ್ಯ ವಿಮಾನಗಳ ಮೂಲಕ ತಕ್ಷಣವೆ ಹೊರಟು ಬರಲು ಸೂಚನೆ ನೀಡಿದೆ.
ಸಿರಿಯಾದಲ್ಲಿನ ಪರಿಸ್ಥಿತಿ ಹದಗೆಡುತ್ತಿದ್ದು, ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಆದೇಶದವರೆಗೂ ಭಾರತೀಯ ಪ್ರಜೆಗಳು ಸಿರಿಯಾ ಭೇಟಿಯನ್ನು ನಿಯಂತ್ರಿಸಬೇಕು. ಪ್ರಸ್ತುತ ಸಿರಿಯಾದಲ್ಲಿರುವ ಭಾರತೀಯ ಪ್ರಜೆಗಳು ಡಮಾಸ್ಕಸ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಿ. ಭಾರತೀಯ ಪ್ರಜೆಗಳಿಗೆ ತುರ್ತು ಸಹಾಯವಾಣಿ ಸಂಖ್ಯೆ +963 993385973 ಹಾಗೂ [email protected] ಇಮೇಲ್ ಐಡಿ ಮೂಲಕ ಸಂಪರ್ಕಿಸುವಂತೆ ತಿಳಿಸಿವೆ.
ಜೊತೆಗೆ ಈ ತಕ್ಷಣಕ್ಕೆ ಹೊರಡಲು ಸಾಧ್ಯವಾಗುವ ಭಾರತೀಯರಿಗೆ ವಾಣಿಜ್ಯ ವಿಮಾನಗಳು ಲಭ್ಯವಿದೆ. ಈ ವಿಮಾನದ ಮೂಲಕ ಭಾರತಕ್ಕೆ ವಾಪಾಸ್ ಆಗುವಂತೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಅವರು ಮಾತನಾಡಿ, ಸಿರಿಯಾದ ಉತ್ತರದಲ್ಲಿ ಇತ್ತೀಚಿನ ಪರಿಸ್ಥಿತಿಯನ್ನು ಗಮನಿಸಲಾಗಿದೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಸಿರಿಯಾದಲ್ಲಿ ಸುಮಾರು 90 ಭಾರತೀಯರಿದ್ದಾರೆ, ಇದರಲ್ಲಿ 14 ಮಂದಿ ಯುಎನ್ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ವಿದೇಶಾಂಗ ಸಚಿವಾಲಯ ಸುರಕ್ಷತೆ ಮತ್ತು ಭದ್ರತೆಗಾಗಿ ಭಾರತೀಯರೊಂದಿಗೆ ನಿಕಟ ಸಂಪರ್ಕದಲ್ಲಿದೆ ಎಂದು ಹೇಳಿದ್ದಾರೆ.
ಸಿರಿಯಾದಲ್ಲಿ ರಷ್ಯಾ ಹಾಗೂ ಇರಾನ್ ಬೆಂಬಲಿತ ಬಶರ್ ಅಲ್ ಅಸ್ಸಾದ್ ನೇತೃತ್ವದ ಸರ್ಕಾರವಿದೆ. ಆದರೆ, ಈ ಸರ್ಕಾರ ವಿರುದ್ಧ ಸ್ಥಳೀಯ ಇಸ್ಲಾಮಿಕ್ ಭಯೋತ್ಪಾದಕ ಗುಂಪು ತಿರುಗಿ ಬಿದ್ದಿದೆ. ಟರ್ಬಿ ಬೆಂಬಿಲಿತ ಈ ಇಸ್ಲಾಮಿಕ್ ಬಂಡಾಯ ಗುಂಪು ಕಳೆದ ವಾರ ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಕಿತ್ತೆಸೆಯುವ ಎಚ್ಚರಿಕೆ ನೀಡಿತ್ತು. ಸಿರಿಯಾದ ಹಲವು ನಗರಗಳ ಮೇಲೆ ಈ ಗುಂಪು ದಾಳಿ ನಡೆಸಿದೆ. ಭಾರೀ ಹಿಂಸಾಚಾರದ ಮೂಲಕ ನಗರಗಳನ್ನು ವಶಕ್ಕೆ ಪಡೆದಿದ್ದಾರೆ. ಇದೀಗ ಸರ್ಕಾರದ ಪ್ರಮುಖ ಕೇಂದ್ರಗಳನ್ನು ಗುರಿ ಮಾಡಿಕೊಂಡಿದ್ದಾರೆ.
ಈಗಾಗಲೇ ಹಲವು ನಗರಗಳು ಈ ಭಯೋತ್ಪಾದಕರ ಕೈಸೇರಿದೆ. ಅಲೆಪ್ಪೋ, ಹಮಾ ಸೇರಿದಂತೆ ಕೆಲ ನಗರಗಳು ಇದೀಗ ಬಂಡಾಯ ಗುಂಪಿನ ಕೈಯಲ್ಲಿದೆ. ಇಲ್ಲಿ ಹಿಂಸಾಚಾರ ಹೆಚ್ಚಾಗಿದೆ. ಈ ಗುಂಪು ಡಮಾಸ್ಕಸ್ ಸೇರಿದಂತೆ ಕೆಲ ನಗರಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಹಲವು ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಅಧ್ಯಕ್ಷ ಬಶರ್ ಅಲ್ ಆಡಳಿತ ಕೇಂದ್ರಗಳಿಂದ ಕೇವಲ 5 ರಿಂದ 10 ಕಿಲೋಮೀಟರ್ ದೂರದ ವರೆಗೂ ಈ ಬಂಡಾಯ ಗುಂಪು ಹಿಡಿತ ಸಾಧಿಸಿದೆ.
ಬಶರ್ ಅಲ್ ಅಸ್ಸಾದ್ ಕಿತ್ತೆಸೆಯಲು ಹಲವು ಹೋರಾಟಗಳು ನಡೆಯುತ್ತಿದೆ. ಇದಕ್ಕೆ ಬಂಡಾಯ ಗುಂಪು, ಇಸ್ಲಾಮಿಕ್ ಭಯೋತ್ಪಾದಕ ಗುಂಪುಗಳು ಸೇರಿಕೊಂಡಿದೆ. ಸಂಪೂರ್ಣ ಸಿರಿಯಾ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಈ ಬಂಡಾಯ ಹಾಗೂ ಇಸ್ಲಾಮಿಕ್ ಬಯೋತ್ಪಾದಕ ಗುಂಪುಗಳು ಸಜ್ಜಾಗಿದೆ. ಹೀಗಾಗಿ ಸಿರಿಯಾದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ.