ಶಮಿಕ ಎಂಟರ್ ಪ್ರೈಸಸ್ ಲಾಂಛನದಲ್ಲಿ ರಾಧಿಕಾ ಕುಮಾರಸ್ವಾಮಿ ನಿರ್ಮಿಸಿ, ನಾಯಕಿಯಾಗಿ ನಟಿಸಿರುವ ಬಹು ನಿರೀಕ್ಷಿತ “ಭೈರಾದೇವಿ” ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಬಿಡುಗಡೆಗೂ ಮುನ್ನ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.
ನಾನು ಹೆಣ್ಣು ಅಘೋರಿಯ ಬಗ್ಗೆ ಪುಸ್ತಕದಲ್ಲಿ ಓದಿದ್ದೆ. ಅದರ ಬಗ್ಗೆ ಒಂದು ಕಥೆಯನ್ನು ಸಿದ್ದಮಾಡಿಕೊಂಡೆ.
ಆನಂತರ ರವಿರಾಜ್ ಅವರ ಪರಿಚಯವಾಯಿತು. ರವಿರಾಜ್ ಅವರು ನಾನು ಹೇಳಿದ ಕಥೆಯನ್ನು ರೆಕಾರ್ಡ್ ಮಾಡಿಕೊಂಡು ರಾಧಿಕಾ ಕುಮಾರಸ್ವಾಮಿ ಅವರಿಗೆ ಕಥೆ ಕೇಳಿಸಿದರು. ಕಥೆ ಇಷ್ಟಪಟ್ಟ ರಾಧಿಕಾ ಕುಮಾರಸ್ವಾಮಿ ಅವರು “ಭೈರಾದೇವಿ” ಚಿತ್ರಕ್ಕೆ ಚಾಲನೆ ನೀಡಿದರು. ಈವರೆಗೂ ನೀವು ನೋಡಿರದ ಪಾತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ಅವರು ಕಾಣಿಸಿಕೊಳ್ಳಲಿದ್ದಾರೆ.
ಚಿತ್ರದ ಮತ್ತೊಂದು ಪ್ರಮುಖಪಾತ್ರದ ಕುರಿತು ನಾನು ಬರೆಯಬೇಕಾದರೆ, ಈ ಪಾತ್ರವನ್ನು ರಮೇಶ್ ಅರವಿಂದ್ ಅವರು ಮಾಡಿದರೆ ಚೆನ್ನಾಗಿರುತ್ತದೆ ಅಂದುಕೊಂಡೆ. ಅವರು ಕಥೆ ಮೆಚ್ಚಿ ಒಪ್ಪಿಕೊಂಡರು. ಅನು ಪ್ರಭಾಕರ್ ಹಾಗೂ ರಂಗಾಯಣ ರಘು ಅವರ ಪಾತ್ರಗಳು ತುಂಬಾ ಚೆನ್ನಾಗಿದೆ. ಅಘೋರಿಯಾಗಿ ರವಿಶಂಕರ್ ಅವರು ನಟಿಸಿದ್ದಾರೆ. ಹಾರಾರ್ ಜಾನರ್ ನ ಚಿತ್ರವಾಗಿರುವುದರಿಂದ ಶಬ್ದಗಳೇ ಚಿತ್ರದ ಹೈಲೆಟ್. ಇಲ್ಲಿನ ಚಿತ್ರಮಂದಿರಗಳಲ್ಲಿ ಅಂತಹ ಸೌಂಡ್ ಎಫೆಕ್ಟ್ ಇಲ್ಲ ಎಂದು ತಿಳಿಸಿದ ನಿರ್ದೇಶಕ ಶ್ರೀಜೈ, ಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರ ನೀಡಿದ ನಿರ್ಮಾಪಕರಿಗೆ, ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಧನ್ಯವಾದ ತಿಳಿಸಿದರು.
ನಾನು ಈ ಚಿತ್ರ ಒಪ್ಪಿಕೊಳ್ಳಲು ಮೂರು ಕಾರಣ ಎಂದು ತಿಳಿಸಿದ ನಟ ರಮೇಶ್ ಅರವಿಂದ್ ಅವರು, ಮೊದಲು ಶ್ರೀಜೈ ಮಾಡಿಕೊಂಡಿರುವ ಕಥೆ , ಎರಡನೆಯದು “ಆಪ್ತಮಿತ್ರ” ನಂತರ ನಾನು ಹಾರಾರ್ ಚಿತ್ರ ಮಾಡಿಲ್ಲ ಹಾಗೂ ಮೂರನೆಯದು ಈ ತರಹದ ಪಾತ್ರವನ್ನು ಮಾಡಿ ಬಹಳ ವರ್ಷಗಳೇ ಆಗಿದೆ. ಹಾರಾರ್ ನೊಂದಿಗೆ ಕೌಟುಂಬಿಕ ಕಥಾಹಂದರವನ್ನು ನಿರ್ದೇಶಕರು ನಿರೂಪಣೆ ಮಾಡಿರುವ ರೀತಿ ಚೆನ್ನಾಗಿದೆ. ರಾಧಿಕಾ ಕುಮಾರಸ್ವಾಮಿ ಅವರು ಬರೀ ನಟಿಯಷ್ಟೇ ಅಲ್ಲ. ಈ ಚಿತ್ರದ ನಿರ್ಮಾಪಕರು ಕೂಡ. ಯಾವುದೇ ಕೊರತೆ ಬರದ ಹಾಗೆ ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಎಲ್ಲರ ಹಾರೈಕೆ ಇರಲಿ ಎಂದರು ನಟ ರಮೇಶ್ ಅರವಿಂದ್.
ಅನು ಪ್ರಭಾಕರ್ ಹಾಗೂ ರಂಗಾಯಣ ರಘು ತಮ್ಮ ಅನುಭವವನ್ನು ಹಂಚಿಕೊಂಡರು. ಸಾಹಸ ನಿರ್ದೇಶನದ ಬಗ್ಗೆ ರವಿವರ್ಮ ಮಾತನಾಡಿದರು. ಸಹ ನಿರ್ಮಾಪಕ ಯಾದವ್ ಪತ್ರಿಕಾಗೋಷ್ಠಿಯಲ್ಲಿದ್ದರು.ಜೆ.ಎಸ್.ವಾಲಿ ಛಾಯಾಗ್ರಹಣ, ಕೆ.ಕೆ.ಸೆಂಥಿಲ್ ಪ್ರಸಾದ್ ಸಂಗೀತ ನಿರ್ದೇಶನ ಹಾಗೂ ರವಿಚಂದ್ರನ್ ಅವರ ಸಂಕಲನ “ಭೈರಾದೇವಿ” ಚಿತ್ರಕ್ಕಿದೆ.