ಬೆಂಗಳೂರು: ಲೋಕಾಯುಕ್ತ ಪೊಲೀಸರು ಇಂದು ಬೆಳಿಗ್ಗೆ ಭ್ರಷ್ಟ ರಾಜ್ಯ ಸರ್ಕಾರಿ ನೌಕರರ ಮನೆ ಹಾಗೂ ಕಚೇರಿಗಳು ಸೇರಿದಂತೆ ಒಟ್ಟು ಎಂಟು ಮಂದಿ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ.ದಾಳಿ ಸಮಯದಲ್ಲಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ಆಸ್ತಿಗಳಿಗೆ ಸಂಬಂಧಪಟ್ಟ ಕಾಗದಪತ್ರಗಳು, ಚಿನ್ನಾಭರಣ ಹಾಗೂ ನಗದನ್ನು ವಶಪಡಿಸಿಕೊಂಡಿರುತ್ತಾರೆ.
ರಾಯಚೂರಿನ ಬೆಸ್ಕಾಂ ಜೂನಿಯರ್ ಇಂಜಿನಿಯರ್ ಆಗಿರುವ ಹುಲಿ ರಾಜ, ಹಿಂದುಳಿದ ವರ್ಗಗಳಕ್ಷೇಮಾಭಿವೃದ್ಧಿ ಇಲಾಖೆಯ ಬಳ್ಳಾರಿ ಲೋಕೆಶ್, ಗದಗ್ ಬೆಟಗೇರಿ ಮುನಿಸಿಪಾಲಿಟಿಯ ಬೆಳಗಾಂನ ಕಾರ್ಯನಿರ್ವಾಹಕ ಇಂಜಿನಿಯರ್ ಹುಚ್ಚೇಶ್, ತುಮಕೂರಿನ ನಿವೃತ್ತ ಆರ್ ಟಿ ಓ ರಾಜು, ಖಾನಾಪುರ ತಹಸಿಲ್ದಾರ್ ಪ್ರಕಾಶ್ ಬಸವಕಲ್ಯಾಣ, ಬೀದರ್ ಇನ್ಸ್ಪೆಕ್ಟರ್-ಲಿಟ್ರೇಟ್ ಅಸಿಸ್ಟೆಂಟ್ ರವೀಂದ್ರ, ಬೆಂಗಳೂರು ಟ್ರಾನ್ಸ್ಪೋರ್ಟ್ನ ಜಂಟಿ ಆಯುಕ್ತರಾದ ಶೋಭಾ, ಮತ್ತು ಕಡೂರಿನ ಹೆಲ್ತ್ ಅಂಡ್ ಫ್ಯಾಮಿಲಿ ವೆಲ್ಫೇರ್ ಅಧಿಕಾರಿ ಡಾಕ್ಟರ್ ಎಸ್ ಎನ್ ಉಮೇಶ್ ಅವರ ಮನೆಗಳ ಮೇಲೆ ದಾಳಿ ನಡೆದಿದೆ.
ಕೆಲ ಅಧಿಕಾರಿಗಳ ಆಪ್ತರು ಹಾಗೂ ಸಂಬಂಧಿಕರ ಮನೆ ಮೇಲೆಯೂ ದಾಳಿ ನಡೆದಿದೆ.ತುಮಕೂರು ದಿಬ್ಬೂರಿನಲ್ಲಿರುವ ನಿವೃತ್ತ ಆರ್ಟಿಒ ರಾಜು ಎಂಬುವರ ಆಪ್ತ ಎನ್ನಲಾದ ಬ್ರೋಕರ್ ಸತೀಶ್ ಮನೆ ಮೇಲೆಯೂ ದಾಳಿ ನಡೆದಿದೆ ಎಂದು ಹೇಳಲಾಗಿದೆ.ಶೋಭಾ ಅವರ ಮನೆಗೆ ದಾಳಿಗೆಂದು ಲೋಕಾಯುಕ್ತ ಅಧಿಕಾರಿಗಳ ಭೇಟಿ ನೀಡಿದ ಕೂಡಲೇ ಶೋಭಾ ಅವರು ಕೆಲ ಕಾಲ ಬೆದರಿದವರಂತೆ ಕಂಡುಬಂದು ಕಣ್ಣಲ್ಲಿ ನೀರು ಹಾಕಿದ್ದರು ಎಂದು ಹೇಳಲಾಗಿದೆ.ತದನಂತರ ಅಧಿಕಾರಿಗಳಿಗೆ ಪರಿಶೀಲನೆ ನಡೆಸಲು ಅನುವು ಮಾಡಿಕೊಟ್ಟರು ಎಂದು ತಿಳಿದುಬಂದಿದೆ.