ಕನ್ನಡದ ಕೆಲಸವೇ ಚೆಂದ. ಅದರಲ್ಲೂ ಆಧುನಿಕ ಸರ್ವಜ್ಞ ಎಂದೇ ಪ್ರಸಿದ್ಧರಾದ ಡಿವಿಜಿಯವರ ಸಾಹಿತ್ಯವನ್ನು ಓದುವುದು, ತಿಳಿಯುವುದು ಮತ್ತು ಅದರ ಬಗ್ಗೆ ಉಪನ್ಯಾಸವನ್ನು ಕೇಳುವುದು ಮತ್ತಷ್ಟು ಹಿತಕರ. ಈ ಕೆಲಸವನ್ನು ಇತ್ತೀಚಿನ ದಿನಗಳಲ್ಲಿ ರೋಟರಿ ಸಂಸ್ಥೆಯವರು ಮಾಡಿಕೊಂಡು ಬರುತ್ತಿದ್ದಾರೆ. ರೋಟರಿಯೊಳಗೆ ಡಿ ವಿ ಗುಂಡಪ್ಪನವರ ಅಭಿಮಾನಿ ಬಳಗವೊಂದಿದೆ. 2025ರ ಜನವರಿ 13ರಂದು ಸೋಮವಾರ, ಈ ಬಳಗವು ಡಿ ವಿ ಜಿ ದಿನದರ್ಶಿಕೆ ಸಮಾರಂಭವನ್ನು ಏರ್ಪಡಿಸಿತ್ತು. ಇದಕ್ಕೆ ರೋಟರಿ ಬೆಂಗಳೂರು ಬಸವೇಶ್ವರ ನಗರ ಹಾಗೂ ವಿದ್ಯಾರಣ್ಯಪುರ ಕೈ ಜೋಡಿಸಿತ್ತು.
ದಿನದರ್ಶಿಕೆಯ ಮುಖ್ಯ ಆಕರ್ಷಣೆ ಡಿ ವಿ ಜಿ ಯವರ 12 ಮುಕ್ತಕಗಳನ್ನು ಜೋಡಿಸಿರುವುದು. ಇದರ ಜವಾಬ್ದಾರಿಯನ್ನು ವಹಿಸಿಕೊಂಡವರು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಕಾಲೇಜು ವಿದ್ಯಾರ್ಥಿ ಪ್ರಕಾರದ ಸಂಯೋಜಕರಾದ ಮಾನ್ಯ ಶ್ರೀ ತಿಮ್ಮಣ್ಣ ಭಟ್ಟರು. ಉಮರನ ಒಸಗೆ, ಮಂಕುತಿಮ್ಮನ ಕಗ್ಗ ಹಾಗೂ ಮರುಳ ಮುನಿಯನ ಕಗ್ಗ, ಇವುಗಳಿಂದ ಆರಿಸಿದ ಮುಕ್ತಕಗಳ ದಿನದರ್ಶಿಕೆ, ಎಲ್ಲ ಮನೆಗಳ ಮೇಜಿನ ಮೇಲಿರಬೇಕು. ಈ ದಿನದರ್ಶಿಕೆಯ ಬಿಡುಗಡೆ ಸಮಾರಂಭದಲ್ಲಿ `ಮಂಕುತಿಮ್ಮನ ಕಗ್ಗದಲ್ಲಿ ಕೌಟುಂಬಿಕ ಮೌಲ್ಯಗಳು’ ಎಂಬ ವಿಷಯವನ್ನಿಟ್ಟುಕೊಂಡು ರಾಜಾಜಿನಗರದ ರೋಟರಿ ಕಣ್ಣಿನ ಆಸ್ಪತ್ರೆಯಲ್ಲಿ ಇವರು ಉಪನ್ಯಾಸವನ್ನು ನೀಡಿದರು.
ಮಂಕುತಿಮ್ಮನ ಕಗ್ಗ ಡಿವಿಜಿಯವರ ಅತ್ಯುತ್ಕೃಷ್ಟ ಕೃತಿ. ಇದರಲ್ಲಿ ಎರಡು ಮಾತಿಲ್ಲ. ಹಲವಾರು ಮುಕ್ತಕಗಳನ್ನು ಡಿವಿಜಿಯವರು ಮಂಕುತಿಮ್ಮನ ದರ್ಶನದ ರೀತಿಯಲ್ಲಿ ನಮಗೆ ಕೊಟ್ಟಿದ್ದಾರೆ. ಇದೊಂದು ಮನನ ಕಾವ್ಯ ಎಂದು ಡಿ ವಿ ಜಿ ಯವರೇ ಕರೆದಿದ್ದಾರೆ. ಮುಕ್ತಕವೆನ್ನುವುದು ಗುರು ಮತ್ತು ಲಘು ಅಕ್ಷರಗಳನ್ನು ನಿಯಮಿತವಾಗಿ ಜೋಡಿಸಿ ಕಟ್ಟಿದ ಪದ್ಯಗಳು. ಅನೇಕ ರೀತಿಯಲ್ಲಿ ಮುಕ್ತಕಗಳನ್ನು ಬರೆಯಬಹುದಾದರೂ ಮಂಕುತಿಮ್ಮನ ಕಗ್ಗದ ರೀತಿಯ ಮುಕ್ತಕಗಳೇ ಹೆಚ್ಚು ಪ್ರಸಿದ್ಧ.
ಹಾಗಾದರೆ ಕೌಟುಂಬಿಕ ಮೌಲ್ಯಗಳು ಹೇಗಿರಬೇಕು. ಈಗಿನ ಕಾಲದಲ್ಲಿ ಅದರ ಅಗತ್ಯತೆ ಏನು. ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ, ಅಲ್ಲಿನ ಮನೆಗಳಲ್ಲಿ ವಾಸಿಸುವ ಜನರಿಗೆ ಏನು ಮಾರ್ಗದರ್ಶನ. ಅದಕ್ಕಾಗಿ ಕಗ್ಗದ 294ನೇ ಪದ್ಯವನ್ನು ಉಲ್ಲೇಖಿಸಿ, ಜೀವನ ಹೇಗಿರಬೇಕು ಎಂಬುದನ್ನು ಭಟ್ಟರು ಮಾತನಾಡಿದರು. ಒಂದಿಷ್ಟು ಉಪ್ಪು, ಹುಳಿ, ಖಾರ, ಸಿಹಿ ಸೇರಿದರೆ ಹೇಗೆ ಭೋಜನವು ಸೊಗಸುವುದೋ ಅದೇ ರೀತಿ ತಪ್ಪು, ಒಪ್ಪು, ಬೆಪ್ಪು, ಜಾಣತನ, ಕುಂದು ಕೊರತೆಗಳು ಇತ್ಯಾದಿ ಗುಣಗಳು ಸೇರಿದರಷ್ಟೇ ಜೀವನ ಚೆಂದ ಎಂಬುದನ್ನು ನೆನಪಿಸಿದರು. ಇನ್ನು ಮನೆಯ ಮಕ್ಕಳ ಬಗ್ಗೆ ಇನ್ನಿಲ್ಲದ ಕಾಳಜಿ. ಕೂತಲ್ಲಿ ನಿಂತಲ್ಲಿ ಅವರ ಚಾಕರಿ, ಸವಲತ್ತುಗಳನ್ನು ನೀಡಲು ಪೋಷಕರು ಕಾತರರಾಗಿರುತ್ತಾರೆ. ಇದಕ್ಕೆ ಈಗ ಇರುವ ಕುಟುಂಬಕ್ಕೆ ಒಂದು ಮಗು ಎಂಬ ಸ್ಥಿತಿ ಮತ್ತು ಬೆಳೆದ ಆರ್ಥಿಕ ಸ್ಥಿತಿಗತಿ. ಕಗ್ಗದ 420ರಲ್ಲಿ ಡಿ ವಿ ಜಿ ಯವರು ಮಕ್ಕಳ ಬಗ್ಗೆ ಜಾಸ್ತಿ ಚಿಂತೆ ಬೇಡ. ಪೋಷಕರು ನಿಮಿತ್ತ ಮಾತ್ರ. ಅವರನ್ನು ಅವರ ಪಾಡಿಗೆ ಬಿಡಿ ಎಂದು ಹಿತವಾಗಿ ಕಿವಿ ಹಿಂಡುತ್ತಾರೆ.
ಉದಾಹರಣೆಗೆ ಕುರುವಂಶಜರಾದ ಪಾಂಡವ ಕೌರವರನ್ನು ತೋರಿಸುತ್ತಾರೆ. ಏನೆಲ್ಲಾ ಪಾಡುಪಟ್ಟರೂ, ಇಬ್ಬರೂ ರಾಜ್ಯ ಸುಖ ಪಡೆಯಲಿಲ್ಲ. ಆದ್ದರಿಂದ ಅತಿಯಾದ ಮೋಕೆ, ಜೋಕೆ ಸಲ್ಲ ಎಂಬುದು ಅವರ ಅಭಿಮತ. ಇನ್ನು ನಮ್ಮ ಜೀವನದಲ್ಲಿ ಕುಂದುಕೊರತೆಗಳನ್ನು ಅತಿಯಾಗಿ ನೆನಪಿಸಿಕೊಳ್ಳಬೇಡ ಎಂದು ಕಪಿಯ ಕತೆಯನ್ನು 644ರ ಪದ್ಯದಲ್ಲಿ ಹೇಳುತ್ತಾರೆ. ಚಿಕ್ಕ ಗಾಯವ ಕೆರೆಕೆರೆದು ದೊಡ್ಡ ಹುಣ್ಣಾಗಿಸೆ ಅದು ಮಾಯುವುದೆಂತು. ನರಕ ಬೇರೆಲ್ಲೂ ಇಲ್ಲ. ನಮ್ಮ ಮನಸ್ಸಿನಲ್ಲೇ ಇದೆ. ಆದ್ದರಿಂದ ನಿನ್ನ ಜೀವನವನ್ನು ಸುಖವಾಗಿ ನಡೆಸು ಎಂದು ಹೇಳುತ್ತಾ 864ರ ಮುಕ್ತಕದಲ್ಲಿ ಹಗೆತನವನ್ನು ಬಿಡು, ಯಾಕೆಂದರೆ ಅದೊಂದು ಕಾಳ್ಗಿಚ್ಚಿನಂತೆ. ಕಾಡು ಉರಿದು ಹೋದ ನಂತರವಷ್ಟೇ ಕಿಚ್ಚು ನಂದುವುದು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಹಾಗಾದರೆ ಮನವನ್ನು ಹೇಗೆ ಹತೋಟಿಗೆ ತರಬೇಕು’ ಮನಸ್ಸು ಎಂಬುದು ಹುಚ್ಚು ಕುದುರೆ. ಒಮ್ಮೆ ಇಲ್ಲಿದ್ದರೆ ಮತ್ತೊಂದು ಕ್ಷಣದಲ್ಲಿ ಬ್ರಹ್ಮಾಂಡದ ಮೂಲೆಗೂ ಅದು ಹೋಗಲು ಶಕ್ಯ. ಹಾಗಾಗಿ ಚಿಕ್ಕ ಚಿಕ್ಕ ಉಪಾಯದಿಂದ ಮನಸ್ಸನ್ನು ದಾರಿಗೆ ತರಲು 375ರಲ್ಲಿ ಗುಂಡಪ್ಪನವರು ನಿರ್ದೇಶಿಸಿದ್ದಾರೆ. ಗೀತೆಯ ಧ್ಯಾನಯೋಗದಲ್ಲಿ ಶ್ರೀಕೃಷ್ಣ ಕೂಡ ಇದೇ ಮಾತನ್ನು 25 ಮತ್ತು 26ನೇ ಶ್ಲೋಕದಲ್ಲಿ ಹೇಳುತ್ತಾನೆ. ಮನದ ಹದವರಿಯುವ ದಾರಿ ಮನಸ್ಸನ್ನು ಧರಿಸಿಕೊಂಡಿರುವ ಮನುಜನ ಬಳಿಯೇ ಇದೆ. ಅದರ ಸೂಕ್ಷ್ಮವರಿಯಬೇಕು.
ಇದೊಂದು ರೀತಿ ಮನೆಯಲ್ಲಿ ಹಾಲನ್ನು ಕಾಯಿಸಿದ ಹಾಗೆ. ಹೆಚ್ಚಾದರೆ ಉಕ್ಕಿ, ಕಡಿಮೆಯಾದರೆ ಹಸಿಯಾಗಿ, ಕದಡಿದರೆ ಒಡೆದು ಹೋಗುವ ಹಾಲಿನಂತೆ, ಮನಸಿನ ಹದ ನೋಡು ಎಂದು ಕಗ್ಗದ 378ರ ಪದ್ಯದಲ್ಲಿ ತಿಳಿಯಗೊಳಿಸಿದ್ದಾರೆ. ಮತ್ತಿನ್ನು ಮನೆಯ ಸದಸ್ಯರ ಜೊತೆ ಹೇಗಿರಬೇಕು. ಅತಿಯಾದ ಪ್ರೀತಿಯಿದೆ ಅಂತ ಚಿನ್ನದ ಸೂಜಿಯಿಂದ ಚುಚ್ಚಿದರೆ ನೋವಾಗದೇ ಇರಬಹುದೇ ಅಥವಾ ನಮ್ಮ ಧರ್ಮವನ್ನು ಅವರ ಮೇಲೆ ಹೇರಬಹುದೇ ಅಥವಾ ಮಾತು ಮಾತಿಗೂ ಹೀಯಾಳಿಸುವ ಒಂದುಗಳು ಜತೆಗಿದ್ದರೆ ಸರಿಯಾದೀತೇ’ ಮಂಗಬುದ್ಧಿಯ ಜನರು ಎಂದು 176ನೇ ಪದ್ಯದಲ್ಲಿ ವಿವರಿಸುತ್ತಾರೆ. ಇನ್ನು ಜೀವನ ಸುಖ ಹೇಗೆ, 820ರ ಕಗ್ಗದಲ್ಲಿ ಇದು ಮೂವರ ವ್ಯಾಪಾರ, ನೀನು, ಜಗತ್ತು ಮತ್ತು ಅದೃಷ್ಟ. ಕೆಲವೊಮ್ಮೆ ಅದೃಷ್ಟದ ವಿಚಾರದ ಮೇಲೆಯೇ ಎಲ್ಲವೂ ನಿಂತಿರುತ್ತದೆ. ಇದನ್ನು ಅರಿತವನು ಸುಖಿ. ಕೊಲೆಯಲ್ಲಿ ಕಲಶವಿಟ್ಟಂತೆ 759 ರಲ್ಲಿ ಕೆಡುಕುಗಳ ನಡುವೆ ಒಳಿತು ಯಾವುದು ಎಂದು ಅರಸುವುದೇ ದಾರಿ.
ಹರುಷಕಿದೇ ರಹದಾರಿ. ಇದುವೇ `ಅರಸು’ ದಾರಿ. ಈ ಕಗ್ಗದೊಂದಿಗೆ ಉಪನ್ಯಾಸವನ್ನು ಮುಗಿಸಿ ಭಟ್ಟರು ಶ್ರೋತೃಗಳನ್ನು ಕಗ್ಗದ ರಸಧಾರೆಯಲ್ಲಿ ತೋಯಿಸಿದರು ಎಂದರೆ ತಪ್ಪಾಗಲಾರದು. `ಸೂತ್ರೇ ಮಣಿಗಣಾ ಇವ’ ಎಂಬ ಗೀತಾವಾಕ್ಯದಂತೆ ತಿಮ್ಮಣ್ಣ ಭಟ್ಟರು ಕಗ್ಗದ ಬಿಡಿದಾರಗಳನ್ನು ರೇಷ್ಮೆ ಶಾಲಿನಂತೆ ಹೊಸೆದು ನಮಗೆಲ್ಲಾ ಹೊದಿಸಿದರು. ಇಂತಹ ಅವಕಾಶವನ್ನು ಕಲ್ಪಿಸಿದ ರೋಟರಿ ಸಂಸ್ಥೆಯವರಿಗೂ ನಾವೆಲ್ಲರೂ ಆಭಾರಿಯಾಗಿರೋಣ.