ವಿಜಯಪುರ: ಹೋಬಳಿಯ ಮಂಡಿಬೆಲೆ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 2023-24 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಭಾನುವಾರ ಮಂಡಿಬೆಲೆ ಚನ್ನಕೇಶವಸ್ವಾಮಿ ದೇವಾಲಯದ ಆವರಣದಲ್ಲಿ ಸಂಘದ ಅಧ್ಯಕ್ಷ ಸಿ.ಎನ್.ಚನ್ನೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. 9 ಗ್ರಾಮಗಳಿಂದ ಷೇರುದಾರರು, ಸಂಘದ ನಿರ್ದೇಶಕರು ಸಭೆಯಲ್ಲಿ ಭಾಗವಹಿಸಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಕೃಷ್ಣಮೂರ್ತಿ ಅವರು, ಸಂಘದ ವಾರ್ಷಿಕ ವರದಿಯನ್ನು ಮಂಡಿಸಿದರು. ಪ್ರಸಕ್ತ ವರ್ಷದಲ್ಲಿ ಸಂಘಕ್ಕೆ 5 ಲಕ್ಷ 61 ಸಾವಿರ 303 ರೂಪಾಯಿ ನಿವ್ವಳ ಲಾಭ ಬಂದಿದೆ ಎಂದು ತಿಳಿಸಿದರು. 2024-25 ನೇ ಸಾಲಿನ ಬಜೆಟ್ ಗೆ ಸಭೆಯಿಂದ ಅನುಮೋದನೆ ಪಡೆದುಕೊಂಡರು.
ಸಂಘದ ಅಧ್ಯಕ್ಷ ಸಿ.ಎನ್.ಚನ್ನೇಗೌಡ ಮಾತನಾಡಿ, ಸಂಘವು ರೈತರಿಗಾಗಿ ಇರುವುದರಿಂದ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಕೆಸಿಸಿ ಸಾಲವನ್ನು ವಿತರಣೆ ಮಾಡಲಾಗಿದೆ. ಶೇ.3 ರಷ್ಟು ಬಡ್ಡಿದರಲ್ಲಿ ಹಸುಗಳಿಗೆ ಸಾಲನೀಡಲಾಗುತ್ತಿದೆ.
ರೈತರು ಸದುಪಯೋಗ ಮಾಡಿಕೊಳ್ಳಬೇಕು. ಕುರಿ ಸಾಕಾಣಿಕೆಗೂ ಸಾಲಸೌಲಭ್ಯ ಸಿಗುತ್ತಿದೆ. ಸಾಲ ಪಡೆದುಕೊಂಡ ರೈತರು, ನಿಗದಿತ ಸಮಯಕ್ಕೆ ಮರುಪಾವತಿ ಮಾಡುವ ಮೂಲಕ ಸಂಘವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು. ಸಂಘದಿಂದ ಪಡಿತರ ಆಹಾರ ಧಾನ್ಯಗಳನ್ನು ಮಾರಾಟ ಮಾಡಲಾಗುತ್ತಿದ್ದು, ಅಕ್ಕಿಯ ಪ್ರಮಾಣವನ್ನು 5 ಕೆ.ಜಿ.ಗೆ ಇಳಿಕೆ ಮಾಡಿರುವುದರಿಂದ ಸಂಘಕ್ಕೆ ಬರಬೇಕಾಗಿರುವ ಲಾಭದ ಪ್ರಮಾಣ ಕಡಿಮೆಯಾಗಿದೆ. ರಸಗೊಬ್ಬರಗಳ ಮಾರಾಟ, ಬೂಸಾ ಮಾರಾಟಕ್ಕೆ ಡಿಸಿಸಿ ಬ್ಯಾಂಕಿನಿಂದ ಸೂಚನೆ ಬಂದಿದ್ದು, ರೈತರು ಸಹಕಾರಿ ಬ್ಯಾಂಕುಗಳಲ್ಲೆ ವ್ಯವಹರಿಸುವುದನ್ನು ರೂಢಿಸಿಕೊಳ್ಳಬೇಕು. ಮಹಿಳಾ ಸಂಘಗಳು ತಾವು ಪಡೆದುಕೊಂಡಿರುವ ಎಸ್.ಎಚ್.ಜಿ.ಸಾಲವನ್ನು ನಿಗದಿತ ಸಮಯಕ್ಕೆ ಮರುಪಾವತಿ ಮಾಡುತ್ತಿರುವುದು ಶ್ಲಾಘನೀಯವೆಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಹಿತ್ತರಹಳ್ಳಿ ಎಂ.ರಮೇಶ್ ಮಾತನಾಡಿ, ರೈತರು, ರಾಷ್ಟ್ರೀಕೃತ ಬ್ಯಾಂಕುಗಳಿಗಿಂತ ಸಹಕಾರಿ ಬ್ಯಾಂಕುಗಳಲ್ಲಿ ವ್ಯವಹರಿಸುವ ಮೂಲಕ ತಾವು ಆರ್ಥಿಕವಾಗಿ ಲಾಭಗಳಿಸಿ, ಸಂಘವನ್ನು ಉನ್ನತಿಗೆ ತರಬಹುದಾಗಿದೆ. ಕೆಸಿಸಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿರುವ ರೈತರಿಗೆ ಸಾಲ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಸಂಘದ ನಿರ್ದೇಶಕರು ಹೆಚ್ಚು ಠೇವಣಿಗಳನ್ನು ಸಂಗ್ರಹಿಸಿಡಬೇಕು. ರೈತರಿಗೆ ಅಗತ್ಯವಾಗಿರುವ ಎಲ್ಲಾ ರೀತಿಯ ಸಹಕಾರವನ್ನು ಬಿಡಿಸಿಸಿ ಬ್ಯಾಂಕ್ ನೀಡಲಿದೆ ಎಂದರು.
ಟಿ.ಎ.ಪಿ.ಸಿ.ಎಂ.ಎಸ್ ತಾಲ್ಲೂಕು ಅಧ್ಯಕ್ಷ ದೇವರಾಜ್ ಮಾತನಾಡಿ, ಸಹಕಾರಿ ಸಂಘಗಳಲ್ಲಿ ಸಾಲ ಪಡೆದುಕೊಂಡ ರೈತರು, ನಿಗದಿತ ಸಮಯದಲ್ಲಿ ಮರುಪಾವತಿ ಮಾಡಿದರೆ ಮಾತ್ರವೇ ಸಂಘಗಳು ಉಳಿಯುತ್ತವೆ. ಚುಟವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಆಡಳಿತವು ಪಾರದರ್ಶಕವಾಗಿರಬೇಕು ಎಂದರು.
ಸಂಘದ ಉಪಾಧ್ಯಕ್ಷೆ ವಿ.ಗೀತಾಮೂರ್ತಿ, ನಿರ್ದೇಶಕರಾದ ಎಸ್.ರಾಜಣ್ಣ, ಎಂ.ಗಂಗಾಧರ, ಡಿ.ರಾಮಚಂದ್ರಪ್ಪ, ಆರ್.ಕೇಶವ, ಸಿ.ದೇವರಾಜು, ಎಸ್.ಕೆಂಪೇಗೌಡ, ಡಿ.ತಿಮ್ಮರಾಯಪ್ಪ, ಎಚ್.ಎಂ.ಶ್ರೀನಾಥ್, ಮಂಜುಳಾ, ಸಿ.ಪ್ರಕಾಶ್, ಮುಖಂಡರಾದ ಕೋರಮಂಗಲ ವೀರಪ್ಪ, ನಾಗರಾಜಪ್ಪ, ಮುನಿಯಮ್ಮ, ಮೂರ್ತಿ, ಬಸವರಾಜ್, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎನ್.ಕೃಷ್ಣಮೂರ್ತಿ, ಇದ್ದರು.ವಿಜಯಪುರ ಹೋಬಳಿ ಮಂಡಿಬೆಲೆ ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ಗಣ್ಯರು ಉದ್ಘಾಟಿಸಿದರು.