ತಿರುವಂತನಪುರಂ: ಮಕರ ಸಂಕ್ರಾಂತಿ ಹಬ್ಬದ ನಿಮಿತ್ತ ಕೇರಳದ ಶಬರಿಮಲೈನಲ್ಲಿ ನಡೆಯಲಿರುವ ಮಕರ ಜ್ಯೋತಿ ದರ್ಶನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈಗಾಗಲೇ ಲಕ್ಷಾಂತರ ಭಕ್ತರು ಶಬರಿಮಲೈಗೆ ಧಾವಿಸಿದ್ದಾರೆ.
ಕೇರಳದ ಶಬರಿಮಲೈನಲ್ಲಿ ಇಂದು ಸಂಜೆ ನಡೆಯಲಿರುವ ಮಕರವಿಳಕ್ಕು ದರ್ಶನಕ್ಕಾಗಿ ಅಥವಾ ಮಕರ ಜ್ಯೋತಿಯನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಶಬರಿಮಲೆಗೆ ಆಗಮಿಸಿದ್ದಾರೆ. ಜನವರಿ 8 ರಿಂದ 15 ರವರೆಗೆ ಪ್ರತಿದಿನ 5 ಸಾವಿರ ಭಕ್ತರಿಗೆ ಮಾತ್ರ ಸನ್ನಿಧಾನಂ ಸ್ಪಾಟ್ ಬುಕಿಂಗ್ ಅನ್ನು ಸೀಮಿತಗೊಳಿಸಿದೆ. ಅದಾಗ್ಯೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಶಬರಿಮಲೈಗೆ ಧಾವಿಸುತ್ತಿದ್ದು, ಭಕ್ತರ ದಟ್ಟಣೆಯ ಬಗ್ಗೆ ಕೇರಳ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಅಲ್ಲದೆ, ಪಾಸ್ ವಿತರಣೆಯ ಮಿತಿಯನ್ನು ದಿನಕ್ಕೆ 5 ಸಾವಿರಕ್ಕೆ ಸೀಮಿತಗೊಳಿಸುವಂತೆ ನಿರ್ದೇಶನ ನೀಡಿದೆ.
ಅಯ್ಯಪ್ಪ ಸ್ವಾಮಿಯನ್ನು ಪೂಜಿಸಲು ಅಪಾರ ಸಂಖ್ಯೆಯ ಭಕ್ತರು ಶಬರಿಮಲೆಗೆ ಆಗಮಿಸುತ್ತಿದ್ದಾರೆ. ಮಕರವಿಳಕ್ಕು ಉತ್ಸವದ ಹಿನ್ನೆಲೆಯಲ್ಲಿ ಭಕ್ತರ ಸುರಕ್ಷತೆಗಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಮಕರವಿಳಕ್ಕು ಉತ್ಸವಕ್ಕೂ ಮುನ್ನ ಅಯ್ಯಪ್ಪನ ದರ್ಶನ ಪಡೆಯಲು ಹಾಗೂ ಮಕರವಿಳಕ್ಕು ಉತ್ಸವದಲ್ಲಿ ಪಾಲ್ಗೊಳ್ಳಲು ಅಪಾರ ಸಂಖ್ಯೆಯ ಭಕ್ತರು ಶಬರಿಮಲೆ ದೇವಸ್ಥಾನಕ್ಕೆ ಆಗಮಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಜನವರಿ 12ರ ಭಾನುವಾರ 60,000, ಜನವರಿ 13ರ ಸೋಮವಾರ 50,000 ಹಾಗೂ ಜನವರಿ 14ರ ಮಂಗಳವಾರ 40,000 ಬುಕಿಂಗ್ ಗೆ ಮಿತಿಗೊಳಿಸಲಾಗಿದೆ. ಮಕರವಿಳಕ್ಕು ಉತ್ಸವ ಜನವರಿ 19 ರಂದು ಕೊನೆಗೊಳ್ಳುತ್ತದೆ ಎಂದು ಅವರು ಮಾಹಿತಿ ನೀಡಿದರು.
ಬಿಗಿಭದ್ರತೆ
ಅಂತೆಯೇ ದೇವಸ್ಥಾನದಲ್ಲಿ ಭದ್ರತೆಗೆ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಮಕರ ವಿಳಕ್ಕು ಉತ್ಸವದ ಭದ್ರತೆ ಮತ್ತು ಸುಗಮ ನಿರ್ವಹಣೆಗಾಗಿ ಒಟ್ಟು 5,000 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಯಾತ್ರಿಕರನ್ನು ನಿರ್ವಹಿಸಲು ಮತ್ತು ಧಾರ್ಮಿಕ ಕಾರ್ಯಕ್ರಮದ ಸಮಯದಲ್ಲಿ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಅಯ್ಯಪ್ಪನ ಆಭರಣ ಯಾತ್ರೆ ಆರಂಭ
ಪಂದಾಳಂ ದೇವಸ್ಥಾನದಿಂದ ಶಬರಿಮಲೆಗೆ ಪವಿತ್ರ ತಿರುವಾಭರಣಂ (ಅಯ್ಯಪ್ಪನ ಆಭರಣ) ಹೊತ್ತ ವಾರ್ಷಿಕ ಮೆರವಣಿಗೆ ಪ್ರಾರಂಭವಾಗಿದ್ದು, ಜನವರಿ 14 ರಂದು ಆಚರಿಸಲಾಗುವ ಮಕರವಿಳಕ್ಕು ಉತ್ಸವದಲ್ಲಿ ಈ ಆಭರಣಗಳನ್ನು ಅಯ್ಯಪ್ಪ ದೇವರಿಗೆ ಅಲಂಕರಿಸಲಾಗುತ್ತದೆ. ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಪ್ರತಿನಿಧಿಗಳು ಮತ್ತು ಹೆಚ್ಚಿನ ಸಂಖ್ಯೆಯ ಭಕ್ತರೊಂದಿಗೆ ತಿರುವಾಭರಣ ಘೋಷಯಾತ್ರೆ (ಮೆರವಣಿಗೆ) ಬೆಟ್ಟದ ದೇವಸ್ಥಾನಕ್ಕೆ ಪ್ರಯಾಣವನ್ನು ಪ್ರಾರಂಭಿಸಿತು.