ಮಕ್ಕಳಲ್ಲಿ ಓದುವ ಪ್ರವೃತ್ತಿಯನ್ನು ಬೆಳೆಸುವಲ್ಲಿ ಅಜ್ಜ-ಅಜ್ಜಿಯರ ಪಾತ್ರ ಹಿರಿದಿದೆ. ಮಕ್ಕಳು ಟಿವಿ ಮತ್ತು ಮೊಬೈಲ್ ನಿಂದ ದೂರವಿರಿಸಲು ರಾಮಾಯಣ ಮಹಾಭಾರತದಂತಹ ಕಥೆಗಳನ್ನು ಹಿರಿಯರು ಮಕ್ಕಳೊಡನೆ ಹಂಚಿಕೊಳ್ಳಬೇಕು. ಮಕ್ಕಳಲ್ಲಿ ಓದುವ ಆಸಕ್ತಿಗೆ ನೀರೆರೆದು ಪೋಷಿಸಿದರೆ, ಮುಂದೆ ಮಕ್ಕಳು ಅವರು ಆಯ್ದು ಕೊಂಡ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಬಹುದು ಎಂದು ಬ್ಯಾಂಕರ್ಸ್ ಕನ್ನಡಿಗರ ಬಳಗದ ಅಧ್ಯಕ್ಷ ಶ್ರೀ ಎಂ ವೆಂಕಟೇಶ ಶೇಷಾದ್ರಿ ತಿಳಿಸಿದರು.
ಶ್ರೀಯುತರು ಬೆಂಗಳೂರಿನ ಬ್ಯಾಂಕರ್ಸ್ ಕನ್ನಡಿಗರ ಬಳಗವು ಡಿಗ್ನಿಟಿ ಫೌಂಡೇಶನ್ ಆಶ್ರಯದಲ್ಲಿ ಹಿರಿಯ ನಾಗರೀಕರಿಗೆ ನಡೆಸಿದ ಕರ್ನಾಟಕ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಬಹುಮಾನವನ್ನು ವಿತರಿಸಿ ಮಾತನಾಡುತ್ತಿದ್ದರು. ಬ್ಯಾಂಕರ್ಸ್ ಕನ್ನಡಿಗರ ಬಳಗವು 69 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಜ್ಯಾದ್ಯಂತ 69 ಕೇಂದ್ರಗಳಲ್ಲಿ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲು ತೀರ್ಮಾನಿಸಿದ್ದು, ಈಗಾಗಲೇ ಮುನಿರಾಬಾದ್, ಹಾರೋಹಳ್ಳಿ, ಕೊಳ್ಳೆಗಾಲ, ಭದ್ರಾವತಿ ಮತ್ತು ಬೆಂಗಳೂರಿನಲ್ಲಿ ಈ ಸ್ಪರ್ಧೆಗಳನ್ನು ಏರ್ಪಡಿಸಿದೆ ಎಂದರು. ಡಿಗ್ನಿಟಿ ಫೌಂಡೇಶನ್ ನ ಮುಖ್ಯಸ್ಥೆ ಶ್ರೀಮತಿ ಬೃಂದಾ ರಮೇಶ್ ರವರು ಮಾತನಾಡಿ ಡಿಗ್ನಿಟಿ ಫೌಂಡೇಶನ್ ನಡೆದು ಬಂದ ದಾರಿ ಮತ್ತು ಸಮಾಜ ಮುಖಿ ಸೇವೆಗಳ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ಬಳಗದ ಕಾರ್ಯದರ್ಶಿ ಶ್ರೀ ಕೆ ಜಿ ಸಂಪತ್ ಕುಮಾರ್ ರವರಿಂದ ಟಿ ಪಿ ಕೈಲಾಸಂ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಬಹುಮಾನ ವಿಜೇತರಿಗೆ ಕನ್ನಡ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಡಿಗ್ನಿಟಿ ಫೌಂಡೇಶನ್ ನ ಜಯನಗರ ವಿಭಾಗದ ಮುಖ್ಯಸ್ಥೆ ಶಾಂತಾ ಅನಿಲ್ ರವರು ಉಪಸ್ಥಿತರಿದ್ದರು.