ಮಕ್ಕಳು ಮಕ್ಕಳೇ
ಚಿಣ್ಣರು ಅಂದಿನ ಚಿಣ್ಣರುಗಳು
ನಗುತಲಿ ಬಾಲ್ಯವನ್ನು ಕೆಳೆದರು
ಆಡುತಾ ಪಾಡುತ ನೆಗೆಯುತಲಿ
ಆನಂದಿಸಿ ಪಾಠವ ಕಲಿತಿಹರು
ಬಿಸಿಲು ಚಳಿಮಳೆಯನು ಲೆಕ್ಕಿಸಿದೆ
ಬೀದಿ ಬೀದಿಯಲ್ಲಿ ಸುತ್ತುತ್ತಿದ್ದರು
ಪ್ರಕೃತಿಯ ಮಡಿಲಲ್ಲಿ ಕುಣಿಯುತ
ಅವಳ ಜೊತೆ ಸಂಬAಧ ಬೆಸೆದರು
ಸಿಕ್ಕ ಸಿಕ್ಕ ವಸ್ತುಗಳೇ ಆಟಿಕೆಗಳು
ಮರದಲ್ಲಿ ನೇತಾಡುವ ಕೋತಿಗಳು
ಕೆರೆತೊರೆಯಲಿ ಈಜಾಡಿ ಮಿಂದರು
ದೇಹವೆಂದಿಗೂ ಕುಗ್ಗದೆ ಬದುಕಿದರು
ಚಿಣ್ಣರು ಇಂದಿನ ಚಿಣ್ಣರುಗಳು
ಅಪ್ಪನ ಅಮ್ಮನ ಮುದ್ದುಗಳು
ಆಡಲು ಹೊರಗೆಂದು ಬಿಡರವರು
ಉದಯಾಸ್ತವನೆಂದಿಗೂ ಕಾಣರು
ಜಂಗಮವಾಣಿಯ ಪಿಡಿದಿಹರು
ವಾಹಿನಿಯಲ್ಲೇ ಮುಳುಗಿಹರು
ಓದುವ ಕಾಯಕ ಮಾಡಿಹರು
ಯಾಂತ್ರಿಕ ಬದುಕು ಸಾಗಿಸಿಹರು
ಓಟಕೆ ಪಾಠಕೆ ಸೀಮಿತ ಸಮಯ
ಮರೆತರು ಅಂದ ಚೆಂದದ ನಗೆಯ
ಗುರುಹಿರಿಯರ ನುಡಿಯನ್ನಾಲಿಸದೆ
ತಮಗೆಲ್ಲದರ ಅರಿವಿದೆ ಎನ್ನುವರು
ಅಂದಿಗೂ ಇಂದಿಗೂ ಮಕ್ಕಳು ಮಕ್ಕಳೇ
ಬೆಳೆಸಿಹೆವು ನಾವು ಅವರನು ಹೀಗೆಕೆ
ಸುಂದರ ಬಾಲ್ಯವನ್ನು ಕಿತ್ತು ಕೊಳ್ಳುತ
ಮೋಸಮಾಡಿಹೆವು ಮುಗ್ಧತೆಯ ಕೊಲ್ಲುತಾ
– ಹಂ. ಶ್ರೀ. ಸೂರ್ಯ ಪ್ರಕಾಶ್, ಬೆಂಗಳೂರು