ಚನ್ನಪಟ್ಟಣ ಅಖಾಡ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಹಾಗೂ ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಡುವಿನ ಪೈಪೋಟಿ ತೀವ್ರಗೊಳ್ಳುತ್ತಿದೆ. ಕ್ಷೇತ್ರ ಗೆಲ್ಲಲು ಎರಡು ಪಕ್ಷಗಳು ತಮ್ಮೆಲ್ಲಾ ಸಾಮರ್ಥ್ಯಗಳನ್ನು ಬಳಕೆ ಮಾಡುತ್ತಿವೆ.
ಈ ಬಾರಿ ಚನ್ನಪಟ್ಟಣ ಚುನಾವಣಾ ಅಖಾಡದಲ್ಲಿ ಕಣ್ಣೀರು ಹಾಗೂ ಭಾವನಾತ್ಮಕ ವಿಚಾರಗಳೇ ಸದ್ದು ಮಾಡುತ್ತಿದೆ. ಎಚ್ಡಿ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರು ಭಾವನಾತ್ಮಕವಾಗಿ ಕಣದಲ್ಲಿ ಗಮನ ಸೆಳೆಯುವ ಪ್ರಯತ್ನ ನಡೆಸುತ್ತಿದ್ದಾರೆ. ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಅವರು ಕೂಡಾ ಆರೋಗ್ಯ ಸಮಸ್ಯೆಯ ನಡುವೆಯೂ ಮೊಮ್ಮಗನ ಪರವಾಗಿ ಪ್ರಚಾರ ಕಣಕ್ಕೆ ಧುಮುಕಿದ್ದಾರೆ. ಸ್ವತಃ ದೇವೇಗೌಡರು ಅವರೇ ಪ್ರಚಾರಕ್ಕಿಳಿದಿರುವುದು ಚುನಾವಣಾ ಅಖಾಡ ಮತ್ತಷ್ಟು ರಂಗೇರುವಂತೆ ಮಾಡಿದೆ.
ಪ್ರಚಾರ ಕಣದಲ್ಲಿ ಎಚ್ಡಿ ದೇವೇಗೌಡರು ಕಾಣಿಸಿಕೊಂಡಿರುವುದು ಕಾಂಗ್ರೆಸ್ಗೂ ತಲೆನೋವಾಗಿ ಮಾರ್ಪಟ್ಟಿದೆ. ಚನ್ನಪಟ್ಟಣದಲ್ಲಿ ಜೆಡಿಎಸ್ ಪ್ರಬಲವಾಗಿ ಇರುವುದರಿಂದ ಹಾಗೂ ಒಕ್ಕಲಿಗ ಮತಗಳು ದೊಡ್ಡ ಪ್ರಮಾಣದಲ್ಲಿ ಇರುವುದರಿಂದ ಆ ಮತಗಳನ್ನು ಸೆಳೆಯಲು ದೇವೇಗೌಡರ ಪ್ರಚಾರ ಅನುಕೂಲಕರವಾಗಲಿದೆ ಎಂಬುವುದು ಜೆಡಿಎಸ್ ಲೆಕ್ಕಾಚಾರವಾಗಿದೆ. ಜೆಡಿಎಸ್ ಸಾಂಪ್ರದಾಯಿಕ ಮತಗಳು ನಿಖಿಲ್ಗೆ ಸಿಕ್ಕೇ ಸಿಗುತ್ತವೆಯಾದರೂ, ಮುಸ್ಲಿಂ ಮತಗಳು ಕ್ಷೇತ್ರದಲ್ಲಿ ನಿರ್ಣಾಯಕವಾಗಿದೆ. ಈ ಬಾರಿ ಜೆಡಿಎಸ್ ಪಕ್ಷದ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಮುಸ್ಲಿಂ ಮತದಾರರು ಯಾವ ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ.
ಚುನಾವಣ ಅಖಾಡ ತೀವ್ರ ಕುತೂಹಲವನ್ನು ಕೆರಳಿಸಿದ್ದರು ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಯೋಗೇಶ್ವರ್ ಅವರು ಮತದಾರರು ಜಾತಿ ಮೀರಿ ಯೋಚಿಸಿ ಅಭಿವೃದ್ಧಿಗೆ ಮತ ಹಾಕುತ್ತಾರೆಂಬ ವಿಶ್ವಾಸ ವ್ಯಕ್ತಪಡಿಲಿದ್ದಾರೆ. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಯೋಗೇಶ್ವರ್ ಅವರು ಮಾತನಾಡಿದ್ದಾರೆ.