ಉತ್ತರಪ್ರದೇಶ: ಫತೇಪುರ್ ನಲ್ಲಿ ದಲಿತ ವ್ಯಕ್ತಿಯೊಬ್ಬರನ್ನು ಥಳಿಸಿ ಅವಮಾನಿಸಿದ ಪ್ರಕರಣ ಬೆಳಕಿಗೆ ಬಂದಿದೆ. ದಲಿತ ವ್ಯಕ್ತಿ ಯೇಸು ಕ್ರಿಸ್ತನನ್ನು ಆರಾಧಿಸುತ್ತಾನೆ ಎಂದು ಆರೋಪಿಸಿ ಭಜರಂಗದಳದ ಕಾರ್ಯಕರ್ತರು ಮೊದಲು ಆತನಿಗೆ ಮನಬಂದಂತೆ ಥಳಿಸಿ ನಂತರ ತಲೆ ಬೋಳಿಸಿ ಮೆರವಣಿಗೆ ಮಾಡಿದ್ದಾರೆ. ಈ ಸಂಬಂಧ ಇದೀಗ ಗ್ರಾಮದ ಕೆಲವರು ಕೌಂಟರ್ ಎಫ್ಐಆರ್ ದಾಖಲಿಸಿದ್ದಾರೆ. ಗ್ರಾಮದ ಜನರನ್ನು ಕ್ರಿಶ್ಚಿಯನ್ ಧರ್ಮವನ್ನು ಅಳವಡಿಸಿಕೊಳ್ಳುವಂತೆ ದಲಿತ ವ್ಯಕ್ತಿ ಒತ್ತಾಯಿಸುತ್ತಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. ಸದ್ಯ ಪ್ರಕರಣದಲ್ಲಿ ಯಾವುದೇ ಬಂಧನವಾಗಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಪ್ರಕಾರ, ಫತೇಪುರ್ ಜಿಲ್ಲೆಯ ಬಹ್ಲೋಪುರ್ ಅಲೈ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶುಕ್ರವಾರ, ಡಿಸೆಂಬರ್ 28 ರಂದು ಶಿವಬದನ್ ಎಂಬ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದರು. ಮೇಲ್ಜಾತಿ ಎಂದು ಆರೋಪಿಸಲಾದ ಕೆಲವರು ತಮ್ಮ ಮತ್ತು ಅವರ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಶಿವಬದನ್ ಎರಡು ವರ್ಷಗಳ ಹಿಂದೆ ಕ್ರೈಸ್ತ ಧರ್ಮವನ್ನು ಆರಾಧಿಸಲು ಪ್ರಾರಂಭಿಸಿದರು ಎಂದು ಹೇಳಿದರು. ಇದರಿಂದ ಗ್ರಾಮದ ಕೆಲವು ಮೇಲ್ಜಾತಿಯ ಜನರು ಆತನ ಮೇಲೆ ಕೋಪಗೊಂಡು ತಕ್ಕ ಪಾಠ ಕಲಿಸಲು ಮುಂದಾಗಿದ್ದರು ಎಂದು ಆತ ಆರೋಪಿಸಿದ್ದಾನೆ.
ಶಿವಬದನ್ ದೂರಿನ ಆಧಾರದ ಮೇಲೆ, ಪೊಲೀಸರು ಈ ಪ್ರಕರಣದಲ್ಲಿ ರೋಹಿತ್ ದೀಕ್ಷಿತ್, ಲವ್ಲೇಶ್ ಸಿಂಗ್ ಮತ್ತು ಸೋಮಕರನ್ ಮತ್ತು ಇನ್ನೂ ಹಲವಾರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಎರಡು ವರ್ಷಗಳ ಹಿಂದಿನ ಮತಾಂತರ ವಿರೋಧಿ ಕಾನೂನು ಪ್ರಕರಣದಲ್ಲಿ ಶಿವಬದನ್ ಜಾಮೀನಿನ ಮೇಲೆ ಹೊರಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.