ಬೆಂಗಳೂರು: ಜಾತಿನಿಂದನೆ ಬೆದರಿಕೆ ಪ್ರಕರಣದಲ್ಲಿ ಜಾಮೀನು ಪಡೆದ ಶಾಸಕ ಮುನಿರತ್ನ ಜೈಲಿನಿಂದ ಹೊರ ಬರುತ್ತಿದ್ದಂತೆ ಮತ್ತೆ ಅವರನ್ನು ಬಂಧಿಸಲಾಗಿದೆ.
ಗುತ್ತಿಗೆದಾರನಿಗೆ ಬೆದರಿಕೆ ಹಾಕಿದ ಹಾಗೂ ಜಾತಿ ನಿಂದನೆ ಮಾಡಿದ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದಿದ್ದ ಆರ್ಆರ್ ನಗರ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ರಾಮನಗರದ ಕಗ್ಗಲೀಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
2020 ರಿಂದ 2022ರವರೆಗೆ ಶಾಸಕ ಮುನಿರತ್ನ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಮತ್ತು ಬ್ಲ್ಯಾಕ್ಮೇಲ್ ಮಾಡಿದ್ದಾರೆ ಎಂದು ರಾಜರಾಜೇಶ್ವರಿ ನಗರದ 40 ವರ್ಷದ ಮಹಿಳೆ ದೂರು ದಾಖಲಿಸಿದ್ದಾರೆ.ಸಂತ್ರಸ್ತೆ ದೂರಿನ ಆಧಾರದ ಮೇಲೆ ರಾಮನಗರ ಜಿಲ್ಲೆಯ ಕಗ್ಗಲೀಪುರ ಠಾಣೆ ಪೊಲೀಸರು ಶಾಸಕ ಮುನಿರತ್ನ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಾರೆ.
ಈ ಪ್ರಕರಣ ಸಂಬಂಧ ಕಗ್ಗಲೀಪುರ ಠಾಣೆ ಪೊಲೀಸರು ಶಾಸಕ ಮುನಿರತ್ನ ಅವರನ್ನು ಬಂಧಿಸಿದ್ದಾರೆ.ಅತ್ಯಾಚಾರ ಪ್ರಕರಣ ಎದುರಿಸುತ್ತಿರುವ ಬಿಜೆಪಿ ಶಾಸಕ ಮುನಿರತ್ನ ಅಕ್ರಮಗಳಿಗೆ ಸಂಬಂಧಿಸಿದ ಒಂದೊಂದೇ ವಿಚಾರಗಳು, ಬೆಳಕಿಗೆ ಬರುತ್ತಿದೆ. ಮುನಿರತ್ನ ನಾಯ್ಡು ಬಳಿ ಹಲವರ ಖಾಸಗಿ ಅಶ್ಲೀಲ ವಿಡಿಯೋಗಳಿವೆ ಎಂದು ಅತ್ಯಾಚಾರ ಸಂತ್ರಸ್ತೆ ನೀಡಿರುವ ದೂರಿನಲ್ಲಿ ಉಲ್ಲೇಖವಾಗಿದೆ.
ರಾಜಕೀಯ ಎದುರಾಳಿಗಳ ಹಣಿಯಲು ಮುನಿರತ್ನ ಹನಿಟ್ರ್ಯಾಪ್ ಷಡ್ಯಂತ್ರ ಹೂಡುತ್ತಿದ್ದರು. ಅತ್ಯಾಚಾರ ಸಂತ್ರಸ್ತೆ ಮೂಲಕ ಹನಿಟ್ರ್ಯಾಪ್ಗೆ ಯತ್ನಿಸಿದ್ದರು. ಹನಿಟ್ರ್ಯಾಪ್ಗೆ ಅಮಾಯಕ ಹೆಚ್ಐವಿ ಸೋಂಕಿತರನ್ನೂ ಬಳಸಾಗುತ್ತಿತ್ತು ಎಂಬ ಗಂಭೀರ ಆರೋಪಗಳು ಇದೀಗ ಕೇಳಿಬಂದಿವೆ. ಈ ಬಗ್ಗೆ ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮತ್ತೊಂದೆಡೆ ಶಾಸಕ ಮುನಿರತ್ನ ಅವರ ಒಕ್ಕಲಿಗ ಸಮುದಾಯಕ್ಕೆ ಅವಮಾನವಾಗುವಂತೆ ಹೇಳಿಕೆಗಳನ್ನು ನೀಡಿ ಮಾತನಾಡಿದ್ದಾರೆ. ಅವರ ವಿರುದ್ಧ ತೀವ್ರ ಕ್ರಮ ಜರುಗಿಸಬೇಕು ಇದಕ್ಕಾಗಿ ವಿಶೇಷ ತನಿಖಾ ತಂಡ ರಚಿಸಬೇಕೆಂದು ಒತ್ತಾಯಿಸಿ ಒಕ್ಕಲಿಗರ ಶಾಸಕರು, ಸಚಿವರು ಸೇರಿದಂತೆ ಹಲವು ಮುಖಂಡರು ಇಂದು ಮುಖ್ಯಮಂತಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಮುಖ್ಯಮಂತ್ರಿಯವರನ್ನು ಸಚಿವರಾದ ಕೃಷ್ಣಬೈರೇಗೌಡ, ಡಾ. ಎಂ.ಸಿ.ಸುಧಾಕರ್, ಚಲುವರಾಯಸ್ವಾಮಿ ಸೇರಿದಂತೆ ಹಲವು ಮುಖಂಡರು ಭೇಟಿ ಮಾಡಿದ್ದರು.
ಈ ಭೇಟಿ ನಂತರ ಮಾಧ್ಯಮವೊಂದರೊಂದಿಗೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಶಾಸಕ ಮುನಿರತ್ನ ಒಕ್ಕಲಿಗ ಸಮುದಾಯಕ್ಕೆ ಅವಮಾನವಾಗುವಂತೆ ಮಾತನಾಡಿದ್ದಾರೆ. ಅವರ ವಿರುದ್ಧ ಜಾತಿನಿಂದನೆ ಬೆದರಿಕೆ, ಬ್ಲ್ಯಾಕ್ ಮೇಲ್, ಅತ್ಯಾಚಾರ ಸೇರಿದಂತೆ ಹಲವು ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಅವರ ವಿರುದ್ಧ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಿ ಸೂಕ್ತ ಕ್ರಮ ಜರುಗಿಸಬೇಕೆಂದು ಮುಖ್ಯಮಂತ್ರಿಯವರನ್ನು ಒತ್ತಾಯಿಸಿರುವುದಾಗಿ ಹೇಳಿದ್ದಾರೆ.