ಕನಕಪುರ:ತಾಲ್ಲೂಕಿನ ಕಚುವನಹಳ್ಳಿ ಗ್ರಾಮದಲ್ಲಿ ಎಂಎಸ್ಐಎಲ್ ಮದ್ಯದ ಅಂಗಡಿಯನ್ನು ತೆರೆಯಲು ಅಬಕಾರಿ ಇಲಾಖೆಯವರು ಸ್ಥಳ ಪರಿಶೀಲನೆ ನಡೆಸಿದ್ದು ನಮ್ಮ ಗ್ರಾಮದಲ್ಲಿ ಮದ್ಯದ ಅಂಗಡಿಯನ್ನು ತೆರೆಯಲು ನಮ್ಮ ಗ್ರಾಮಸ್ಥರುಗಳಾದ ನಾವುಗಳು ಅವಕಾಶವನ್ನು ನೀಡುವುದಿಲ್ಲವೆಂದು ಕಚುವನಹಳ್ಳಿ ಗ್ರಾಮದ ಮುಖಂಡ ಕುಮಾರ್ ವಿರೋಧ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ಮದ್ಯದಂಗಡಿ ತೆರೆಯುವುದರಿಂದ ಮದ್ಯ ವ್ಯಸನಿಗಳ ಕಾಟ ಜಾಸ್ತಿಯಾಗಿ ಹಲವಾರು ತೊಂದರೆ ಗಳನ್ನು ಎದುರಿಸಬೇಕಾಗುತ್ತದೆ,ಈಗ ನಮ್ಮ ಗ್ರಾಮದಲ್ಲಿ ಎಲ್ಲಾ ಸಮುದಾಯದವರು ಸಹ ಬಾಳ್ವೆಯಿಂದ ಜೀವನ ನಡೆಸುತ್ತಿದ್ದೇವೆ,ಮದ್ಯದಂಗಡಿ ನಮ್ಮ ಗ್ರಾಮದ ನೆಮ್ಮದಿ ಹಾಲಾಗುವುದರಿಂದ ಯಾವುದೇ ಕಾರಣಕ್ಕೂ ಮದ್ಯ ದಂಗಡಿ ತೆರೆಯಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮತ್ತೊಬ್ಬ ಮುಖಂಡರಾದ ಸುರೇಂದ್ರ ಮಾತನಾಡಿ ಮದ್ಯದಂಗಡಿ ಟೆರೆಯುವುದರಿಂದ ನಮ್ಮ ಗ್ರಾಮದ ಯುವಕರು ದುಶ್ಚಟಗಳಿಗೆ ಬಲಿಯಾಗಲಿದ್ದು, ಇದರಿಂದ ಅವರ ಕುಟುಂಬಗಳು ಬೀದಿಗೆ ಬೀಳುವ ಸಾಧ್ಯತೆಗಳಿವೆ, ಗ್ರಾಮದಿಂದ ಯುವಕ ಯುವತಿಯರು ಕಾಲೇಜಿಗೆ ಹೋಗುತ್ತಿದ್ದು ಮಧ್ಯದಂಗಡಿಯಿಂದ ಅವರ ಮೇಲೆ ಕೆಟ್ಟ ಪರಿಣಾಮಗಳು ಬೀರುವುದರಿಂದ ಅವರಿಗೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ಅನುಭವಿಸಬೇಕಾಗುತ್ತದೆ, ಆದ್ದರಿಂದ ನಮ್ಮ ಕ್ಷೇತ್ರದ ಶಾಸಕರು ಉಪ ಮುಖ್ಯಮಂತ್ರಿ ಗಳಾದ ಡಿ ಕೆ ಶಿವಕುಮಾರ್ ಹಾಗೂ ಮಾಜಿ ಸಂಸದರಾದ ಡಿ ಕೆ ಸುರೇಶ್ ರವರು ನಮ್ಮ ಗ್ರಾಮದಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಬಾರದು ಎಂದು ಅವರಲ್ಲಿ ಮನವಿಯನ್ನು ಮಾಡುತ್ತಿದ್ದು ತಾಲ್ಲೂಕಿನಾದ್ಯಂತ ಯಾವುದೇ ಗ್ರಾಮಗಳಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಬಾರದು ಎಂದು ಹೇಳಿದರು.
ತಾಲ್ಲೂಕಿನ ಹೆಸರಾಂತ ಶಕ್ತಿ ದೇವತೆ ಶ್ರೀ ಕಬ್ಬಾಳಮ್ಮ ದೇವಾಲಯವಿದ್ದು ಇಲ್ಲಿ ಮಂಗಳವಾರ,ಶುಕ್ರವಾರ ಭಾನುವಾರಗಳಂದು ವಿಶೇಷ ಪೂಜೆಗಳು ನಡೆಯಲಿದ್ದು, ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸಿ ಕುರಿ ಕೋಳಿ ಮೇಕೆಗಳನ್ನು ಕಡಿದು ಅಮ್ಮನಿಗೆ ಹರಕೆ ತೀರಿಸುತ್ತಾರೆ, ಕಾಬ್ಬಾಳು ದೇವಸ್ಥಾನಕ್ಕೂ ನಮ್ಮ ಕಚುವನಹಳ್ಳಿ ಗ್ರಾಮಕ್ಕೆ ಕೂಗಳತೆ ದೂರವಿದ್ದು, ಮಧ್ಯದಂಗಡಿಯನ್ನು ನಮ್ಮ ಗ್ರಾಮದಲ್ಲಿ ತೆರೆದರೆ ಅನಾಹುತಗಳಾಗುವ ಸಾಧ್ಯತೆಗಳಿವೆ ಎಂದು ಆರೋಪ ಮಾಡಿದರು.ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಪುಷ್ಪಾವತಿ,ಗ್ರಾಮ ಪಂಚಾಯ್ತಿ ಸದಸ್ಯೆ ಸುನೀತಾ ರವಿಕುಮಾರ್, ಕೆ ಬಿ ರಾಜು,ಸುಂದರೇಶ್,ಚಂದ್ರು,ಉಮೇಶ್,ಶಿವಬಸವೇಗೌಡ, ಗೌರಮ್ಮ ಸೇರಿದಂತೆ ಹಲವಾರು ಗ್ರಾಮದ ಮುಖಂಡರು ಹಾಜರಿದ್ದರು.