ನೆಲಮಂಗಲ : ನಗರದ ಜಲಧಾರೆ ಆವರಣದಲ್ಲಿ ಆಯೋಜಿಸಿದ್ದ ಡಾ.ಕೆ.ಸುಧಾಕರ್ ರವರ ಅಭಿನಂದನಾ ಸಭೆಯಲ್ಲಿ ಮದ್ಯ ಹಂಚಿಕೆ ಹಿನ್ನೆಲೆ ರಾಜ್ಯಾಧ್ಯಕ್ಷರ ಸೂಚನೆಯ ಮೇರೆಗೆ ಜಿಲ್ಲಾಧ್ಯಕ್ಷ ರಾಮಕೃಷ್ಣಯ್ಯ, ನೆಲಮಂಗಲ ಮಂಡಲ ಅಧ್ಯಕ್ಷ ಜಗದೀಶ್ ಚೌಧರಿ ಅವರನ್ನು 6 ವರ್ಷಗಳ ಕಾಲ ಬಿಜೆಪಿ ಪಕ್ಷದಿಂದ ಉಚ್ಚಾಟಿಸಿ ಆದೇಶ ನೀಡಿರುವ ಹಿನ್ನೆಲೆಯಲ್ಲಿ, ತಪ್ಪಿಲ್ಲದ ತಪ್ಪಿಗೆ ತಲೆದಂಡ ಮಾಡಿರುವ ಕ್ರಮಕ್ಕೆ ಕಾರ್ಯಕರ್ತರು, ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು..
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಜಯಗಳಿಸಿದ ಡಾ.ಕೆ. ಸುಧಾಕರ್ ಅವರಿಗೆ ಕ್ಷೇತ್ರದ ಜನತೆಯ ಹೆಸರಿನಲ್ಲಿ ಅಭಿನಂದನಾ ಸಭೆಯನ್ನು ಮೈತ್ರಿ ಪಕ್ಷದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಾಡೂಟದ ಜೊತೆಗೆ ಸಭೆಗೆ ಬಂದಿದ್ದವರಿಗೆಲ್ಲ ಮಧ್ಯದ ಬಾಟಲಿಯನ್ನು ಹಂಚಿದರೆಂಬ ಸುದ್ದಿ ಕಾಡಿಚ್ಚಿನಂತೆ ರಾಜ್ಯ ಮತ್ತು ರಾಷ್ಟ್ರ ವ್ಯಾಪ್ತಿಯ ಬಹುತೇಕ ಕಡೆಯೂ ಹಬ್ಬಿದ ಹಿನ್ನೆಲೆಯಲ್ಲಿ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರಾಜ್ಯಾಧ್ಯಕ್ಷರಿಂದ ಬಂದ ಸೂಚನೆಯ ಮೇರೆಗೆ ಜಿಲ್ಲಾಧ್ಯಕ್ಷ ರಾಮಕೃಷ್ಣಯ್ಯ ಅವರು ನೆಲಮಂಗಲ ಮಂಡಲ ಅಧ್ಯಕ್ಷ ಜಗದೀಶ್ ಚೌಧರಿ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಿ ಆದೇಶಿಸಿದ್ದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಜಗದೀಶ್ ಚೌಧರಿ ಮಾತನಾಡಿ ನೋಟಿಸ್ ನೀಡುವ ಬದಲು ನೇರ ಉಚ್ಚಾಟನೆ ಮಾಡಿರುವುದು ಖಂಡನೀಯ, ಪೂರ್ವಭಾವಿ ಸಭೆಗಳಲ್ಲಿ ಚರ್ಚೆಯಾಗಿದ್ದು ಗೊತ್ತಿದ್ದರೂ ಈಗ ಏಕಾಏಕಿ ನನ್ನೊಬ್ಬನ ಮೇಲೆ ಕ್ರಮ ಕೈಗೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು ಪಕ್ಷದ ನಿಲುವಿಗೆ ಬದ್ದನಾಗಿದ್ದು, ಅಬಕಾರಿಇಲಾಖೆಯಿಂದ ಪಡೆಯಲಾಗಿದ್ದ ಅನುಮತಿಯಂತೆ ಸಮಾರಂಭದಲ್ಲಿ ವಿತರಿಸಲಾಗಿದೆಯೇ ಹೊರತು ಬೇರೆ ಯಾವ ಉದ್ದೇಶವೂ ಇಲ್ಲ, ಕೆಲವೊಮ್ಮೆ ಕೆಲಸ ಮಾಡುವಾಗ ಪಕ್ಷದ ಚೌಕಟ್ಟಿನಲ್ಲಿ ತಪ್ಪುಗಳಾಗುವುದು ಸಹಜ.
ಆದರೆ ನಮ್ಮದೇ ಪಕ್ಷದ ಯಾವೊಬ್ಬ ಮುಖಂಡರೂ ಸಮರ್ಥನೆ ಮಾಡಿಕೊಳ್ಳದೆ ಇರುವುದು ಬೇಸರ ತಂದಿದೆ ಬಹುಶಃ ಇದು ಕಾಣದ ಕೈಗಳ ಕುತಂತ್ರ ಇರಬಹುದು ಅದೇನೇ ಇರಲಿ ಪಕ್ಷದ ನಿರ್ಧಾರಕ್ಕೆ ಬದ್ದನಾಗಿರುತ್ತೇನೆ ಎಂದು ಜಗದೀಶ್ ಚೌಧರಿ ಸ್ಪಷ್ಟನೆ ನೀಡಿದರು.