ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದ ನಟ ದರ್ಶನ್ ಅವರಿಗೆ ಆರು ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರಾಗಿದೆ.
ಹೈಕೋರ್ಟ್ನ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರು ಆರು ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ.
ಇಂದು ಬೆಳಿಗ್ಗೆ ಜಾಮೀನು ಮಂಜೂರು ಮಾಡಿದ್ದು, ದರ್ಶನ್ ಅವರುತಮಗೆ ಬೇಕಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯ ಬಹುದಾಗಿದೆ. ಚಿಕಿತ್ಸೆ ಪಡೆದ ನಂತರ ಒಂದು ವಾರದೊಳಗಾಗಿ ಚಿಕಿತ್ಸಾ ವರದಿಯನ್ನು ಕೋರ್ಟ್ಗೆ ನೀಡಬೇಕಾಗಿದೆ.
ಇದೇ ಸಂದರ್ಭದಲ್ಲಿ ಅವರ ಪಾಸ್ಪೋರ್ಟ್ ಸಹ ಸೆರಂಡರ್ ಮಾಡಲು ಸೂಚನೆ ನೀಡಲಾಗಿದೆ. ವೈದ್ಯಕೀಯ ಚಿಕಿತ್ಸೆಗಾಗಿ ದರ್ಶನ್ಗೆ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿದೆ ಎಂದು ದರ್ಶನ್ ಪರ ವಕೀಲ ಸುನೀಲ್ ಕುಮಾರ್ ತೀರ್ಪಿನ ನಂತರ ಪ್ರತಿಕ್ರಿಯೆ ನೀಡಿದ್ದಾರೆ.
ಎಲ್ಲಿ ಚಿಕಿತ್ಸೆ ಪಡೆಯಬೇಕೆಂಬುದರ ಬಗ್ಗೆ ದರ್ಶನ್ ಕುಟುಂಬದವರು ನಿರ್ದರಿಸುತ್ತಾರೆ. ನ್ಯಾಯಾಲಯ ವಿಧಿಸಿರುವ ಎಲ್ಲಾ ಷರತ್ತುಗಳನ್ನು ಪೂರೈಸುತ್ತೇವೆ ಎಂದು ಅವರು ತಿಳಿಸಿದ್ದಾರೆ. ಮತ್ತೊಂದೆಡೆ ಬಳ್ಳಾರಿ ಜೈಲು ಸಿಬ್ಬಂದಿಗೆ ತಮಗೆ ಮಂಜೂರಾಗಿರುವ ಮಧ್ಯಂತರ ಜಾಮೀನು ಬಗ್ಗೆ ಮಾಹಿತಿ ಪಡೆದ ದರ್ಶನ್ ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.
ಇಂದು ಮಧ್ಯಾಹ್ನದೊಳಗಾಗಿ ಜಾಮೀನಿಗೆ ಸಂಬAಧಪಟ್ಟAತಹ ಪ್ರಕ್ರಿಯೆಯನ್ನು ನ್ಯಾಯಾಲಯದಲ್ಲಿ ಪೂರೈಸಿ ಬಿಡುಗಡೆ ಆದೇಶ ಪತ್ರ ಪಡೆದು ಸಂಜೆಯೊಳಗಾಗಿ ದರ್ಶನ್ ಅವರನ್ನು ಬಿಡುಗಡೆ ಮಾಡಿಸುವ ಬಗ್ಗೆ ಕುಟುಂಬದವರು ಅಗತ್ಯ ಕ್ರಮಗಳನ್ನು ಜರುಗಿಸಲು ಮುಂದಾಗಿದ್ದಾರೆ.