ಒಲಿಂಪಿಕ್ಸ್ನಲ್ಲಿ ಎರಡೆರಡು ಕಂಚಿನ ಪದಕಕ್ಕೆ ಕೊರಳೊಡ್ಡಿದ್ದ ಶೂಟರ್ ಮನು ಭಾಕರ್, ಚೆಸ್ ವಿಶ್ವ ಚಾಂಪಿಯನ್ ದೊಮ್ಮರಾಜು ಗುಕೇಶ್ ಸೇರಿ ನಾಲ್ವರನ್ನು ಧ್ಯಾನ್ಚಂದ್ ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕ್ರೀಡಾ ಸಚಿವಾಲಯ ತಿಳಿಸಿದೆ.ಪುರುಷರ ಹಾಕಿ ತಂಡದ ಕ್ಯಾಪ್ಟನ್ ಹರ್ಮನ್ಪ್ರೀತ್ ಸಿಂಗ್ ಹಾಗೂ ಪ್ಯಾರಾ ಒಲಿಂಪಿಕ್ ಚಿನ್ನದ ಪದಕ ವಿಜೇತ ಪ್ರವೀಣ್ ಕುಮಾರ್ ಕೂಡ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಖೇಲ್ ರತ್ನ ಭಾರತದಲ್ಲಿ ಕ್ರೀಡಾಪಟುಗಳಿಗೆ ನೀಡಲಾಗುವ ಅತ್ಯುನ್ನತ ಪ್ರಶಸ್ತಿಯಾಗಿದೆ. ಇದೇ ವೇಳೆ ಕ್ರೀಡಾ ಇಲಾಖೆ ಅರ್ಜುನ ಪ್ರಶಸ್ತಿಗೆ 32 ಕ್ರೀಡಾಪಟುಗಳನ್ನು ಆಯ್ಕೆ ಮಾಡಿದೆ. ಇದರಲ್ಲಿ 17 ವಿಶೇಷ ಚೇತನ ಕ್ರೀಡಾಪಟುಗಳೂ ಸೇರಿದ್ದಾರೆ.ವಿವಾದಕ್ಕೆ ಗುರಿಯಾಗಿತ್ತು ಪ್ರಶಸ್ತಿ: ಇತ್ತೀಚೆಗೆ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾದ ಕ್ರೀಡಾಪಟುಗಳ ಪಟ್ಟಿಯಲ್ಲಿ ಮನು ಭಾಕರ್ ಹೆಸರಿಲ್ಲ ಎಂಬ ವಿಚಾರ ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು.
ಮನು ಅವರ ತಂದೆ ರಾಮ್ ಕಿಶನ್ ಮತ್ತು ಕೋಚ್ ಜಸ್ಪಾಲ್ ರಾಣಾ ಅವರು ಈ ಬಗ್ಗೆ ಆಕ್ರೋಶವನ್ನೂ ವ್ಯಕ್ತಪಡಿಸಿದ್ದರು. ಆದರೆ, ಅರ್ಜಿ ಸಲ್ಲಿಕೆ ವೇಳೆ ತಮ್ಮ ಕಡೆಯಿಂದ ಲೋಪ ಆಗಿರಬಹುದು ಎಂದು ಸ್ವತಃ ಮನು ಭಾಕರ್ ಅವರೇ ಒಪ್ಪಿಕೊಂಡಿದ್ದರು. 22 ವರ್ಷದ ಮನು ಭಾಕರ್ ಒಲಿಂಪಿಕ್ಸ್ನ ಒಂದೇ ಆವೃತ್ತಿಯಲ್ಲಿ ಎರಡು ಪದಕಗಳನ್ನು ಗೆದ್ದ ಸ್ವತಂತ್ರ ಭಾರತದ ಮೊದಲ ಕ್ರೀಡಾಪಟುವಾಗಿದ್ದಾರೆ. ಆಗಸ್ಟ್ನಲ್ಲಿ ನಡೆದ 10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ಮತ್ತು 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಗಳಲ್ಲಿ ಅವರು ಕಂಚು ಗೆದ್ದಿದ್ದರು.