ಮಂಡ್ಯ: ತೋಟದ ಮನೆಗೆ ಬಂದ ಅಪರಿಚಿತ ವ್ಯಕ್ತಿಯೊಬ್ಬ ಮರ ಕತ್ತರಿಸುವ ಯಂತ್ರದಲ್ಲಿ ಮನೆಯ ಮಾಲೀಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ. 60 ವರ್ಷದ ರಮೇಶ್ ಕೊಲೆಯಾದ ದುರ್ದೈವಿ. ಮರ ಕತ್ತರಿಸುವ ಯಂತ್ರದಿಂದಲೇ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಇನ್ನೂ ಪಾಪಿಯ ಕೈಯಲ್ಲಿ ಸಿಲುಕಿ ಮೃತ ರಮೇಶ್ ಪತ್ನಿ ಯಶೋಧಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿನ್ನೆ ಸಂಜೆ ಏಳು ಗಂಟೆ ಸುಮಾರಿಗೆ ಅಪರಿಚಿತ ವ್ಯಕ್ತಿ, ರಮೇಶ್ ಮನೆಗೆ ಬಂದು ಮರ ಕತ್ತರಿಸುವ ಯಂತ್ರ ಬುಕ್ ಮಾಡಿದ್ದಾರೆ ಎಂದು ಬಾಗಿಲು ತಟ್ಟಿದ್ದಾನೆ. ಈ ವೇಳೆ ಯಶೋಧಮ್ಮ ನಾವು ಯಾವುದನ್ನು ಬುಕ್ ಮಾಡಿಲ್ಲ ಎಂದು ಹೇಳುತ್ತಿದ್ದಂತೆ ಯಶೋಧಮ್ಮ ಮೇಲೆ ಅಟ್ಯಾಕ್ ಮಾಡಿದ್ದಾನೆ. ಮರ ಕತ್ತರಿಸುವ ಯಂತ್ರವನ್ನು ಆನ್ ಮಾಡಿ ಯಶೋಧಮ್ಮ ಮುಖದ ಭಾಗಕ್ಕೆ ಹಿಡಿದಿದ್ದಾನೆ. ಈ ಹಿನ್ನೆಲೆಯಲ್ಲಿ ಯಶೋಧಮ್ಮ ಪ್ರಜ್ಞೆ ತಪ್ಪಿದ್ದಾಳೆ. ನಂತರ ಮನೆಯೊಳಗೆ ನುಗ್ಗಿದ ಆರೋಪಿ ಮನೆಯೊಳಗೆ ಇದ್ದ ರಮೇಶ್ ಮೇಲೆ ಅಟ್ಟಹಾಸ ಮೆರೆದಿದ್ದಾನೆ.
ಮಲಗಿದ್ದ ರಮೇಶ್ ಅವರ ಕುತ್ತಿಗೆಗೆ ಮರ ಕತ್ತರಿಸುವ ಯಂತ್ರವನ್ನು ಹಿಡಿದಿದ್ದಾನೆ. ನಂತರ ರಮೇಶ್ ಕೈ ಭಾಗಕ್ಕೆ ಎಲ್ಲಾ ಹಿಡಿದು ಬರ್ಬರವಾಗಿ ಹತ್ಯೆ ಮಾಡುತ್ತಾನೆ. ಈ ವೇಳೆ ಪ್ರಜ್ಞೆ ತಪ್ಪಿದ್ದ ಯಶೋಧಮ್ಮ ಎಚ್ಚರಗೊಂಡು ಮನೆಯ ಬಾಗಿಲನ್ನು ಹೊರಗಡೆಯಿಂದ ಲಾಕ್ ಮಾಡಿ, ನಂತರ ಸ್ಥಳೀಯರನ್ನು ಕರೆದಿದ್ದಾರೆ. ಈ ವೇಳೆ ಮರ ಕತ್ತರಿಸುವ ಯಂತ್ರದ ಮೂಲಕ ಬಾಗಿಲನ್ನು ಕೊಯ್ಯಲು ಸಹ ಆತ ಯತ್ನಿಸಿದ್ದಾನೆ. ಆದ್ರೆ, ಅದು ಸಾಧ್ಯವಾಗಿಲ್ಲ.
ಇನ್ನು ಅಕ್ಕಪಕ್ಕದ ಜನರು ಸೇರಿಕೊಂಡು ತಕ್ಷಣ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮನೆಯ ಒಳಗೆ ಬಂಧಿಯಾಗಿದ್ದ ಆರೋಪಿಯನ್ನ ಆಚೆ ಕರೆದುಕೊಂಡು ಬರುತ್ತಿದ್ದಂತೆಯೇ ಸ್ಥಳೀಯರು ಧರ್ಮದೇಟು ನೀಡಿದ್ದಾರೆ. ಇದರಿಂದ ಅಸ್ವಸ್ಥಗೊಂಡಿರುವ ಆರೋಪಿಯನ್ನ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನು ಕೊಲೆ ಆರೋಪಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಯಶೋಧಮ್ಮರನ್ನ ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನು ಇದೇ ವೇಳೆ ಮತ್ತೊಬ್ಬ ಶಂಕಿತ ಆರೋಪಿಯನ್ನ ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕೊಲೆ ಪ್ರಕರಣ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಒಟ್ಟಾರೆ ಒಂಟಿ ಮನೆಯಲ್ಲಿ ನಡೆದ ಭೀಕರ ಹತ್ಯೆಗೆ ಇಡೀ ಜನ ಬೆಚ್ಚಿ ಬಿದ್ದಿದ್ದಾರೆ.