ತಿರುವನಂತಪುರ: ಚಲನಚಿತ್ರ ಮತ್ತು ಕಿರುತೆರೆ ನಟ ದಿಲೀಪ್ ಶಂಕರ್ ಭಾನುವಾರ ತಿರುವನಂತಪುರದ ವ್ಯಾನ್ರಾಸ್ ಜಂಕ್ಷನ್ ಬಳಿಯ ಹೋಟೆಲ್ ಕೋಣೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಘಟನೆ ನಂತರ ಕಂಟೋನ್ಮೆಂಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದಿಲೀಪ್ ನಾಲ್ಕು ದಿನಗಳ ಹಿಂದೆ ಹೋಟೆಲ್ಗೆ ಚೆಕ್ ಇನ್ ಆಗಿದ್ದರು. ಹೋಟೆಲ್ ಸಿಬ್ಬಂದಿ ಪ್ರಕಾರ, ಕಳೆದ ಎರಡು ದಿನಗಳಿಂದ ಅವರು ತಮ್ಮ ಕೊಠಡಿಯಿಂದ ಹೊರಗೆ ಕಾಲಿಟ್ಟಿರಲಿಲ್ಲ. ಭಾನುವಾರ, ಅವರ ಕೊಠಡಿಯಿಂದ ದುರ್ವಾಸನೆ ಹೊರಹೊಮ್ಮುವುದನ್ನು ಗಮನಿಸಿದ ನಂತರ ಬಾಗಿಲು ತೆರೆದು ನೋಡಿದಾಗ ನಟ ಸತ್ತಿರುವುದು ಪತ್ತೆಯಾಗಿದೆ.
ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ್ದಾರೆ. ಕೊಠಡಿಯನ್ನು ಪರೀಕ್ಷಿಸಲು ವಿಧಿವಿಜ್ಞಾನ ತಂಡವನ್ನು ನಿಯೋಜಿಸಲಾಗಿದೆ ಎಂದು ಕಂಟೋನ್ಮೆಂಟ್ ಎಸಿಪಿ ತಿಳಿಸಿದ್ದಾರೆ.
ಸದ್ಯಕ್ಕೆ ಯಾವುದೇ ರೀತಿಯ ಅನುಮಾನಗಳು ಇಲ್ಲ. ಮರಣೋತ್ತರ ಪರೀಕ್ಷೆಯ ನಂತರವೇ ಸಾವಿಗೆ ನಿಖರವಾದ ಕಾರಣ ಪತ್ತೆಯಾಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದಿಲೀಪ್ ಅವರ ಸಹ ನಟರು ಅವರಿಗೆ ಫೋನ್ ಕರೆ ಮಾಡಿ ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕಳವಳಗೊಂಡ ಅವರು ಅವರನ್ನು ಪರೀಕ್ಷಿಸಲು ಹೋಟೆಲ್ಗೆ ಭೇಟಿ ನೀಡಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿವೆ.