ಲಾಹೋರ್: ಹದಿನೈದು ವರ್ಷಗಳ ನಂತರ ಮೂರನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಆದಮ್ಯ ವಿಶ್ವಾಸದಲ್ಲಿರುವ ಆಸ್ಪ್ರೇಲಿಯಾ ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸುವ ಮೂಲಕ ಮೊದಲ ಹಂತವನ್ನು ದಾಟುವಲ್ಲಿ ಯಶಸ್ವಿಯಾಗಿದೆ.
ಗಡಾಫಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಅಫಘಾನಿಸ್ತಾನ ವಿರುದ್ಧದ ‘ಬಿ’ ಗುಂಪಿನ ಪಂದ್ಯ ಮಳೆಯಿಂದಾಗಿ ಅರ್ಧಕ್ಕೆ ಮೊಟಕುಗೊಂಡ ಹಿನ್ನೆಲೆಯಲ್ಲಿ ಒಂದಂಕ ಪಡೆದ ಸ್ಟೀವನ್ ಸ್ಮಿತ್ ಬಳಗ, ನಾಲ್ಕರ ಘಟ್ಟಕ್ಕೆ ಮುನ್ನಡೆದಿದೆ. ಹಿಂದಿನ ಪಂದ್ಯದಲ್ಲಿಇಂಗ್ಲೆಂಡ್ ತಂಡಕ್ಕೆ ಆಘಾತ ನೀಡಿ ಕ್ರೀಡಾಭಿಮಾನಿಗಳ ಮನಸೂರೆಗೊಂಡಿದ್ದ ಆಫ್ಘನ್, ಉಪಾಂತ್ಯದ ಕನಸು ಬಹುತೇಕ ಕ್ಷೀಣಿಸಿದೆ. ಆದಾಗ್ಯೂ ಅದರ ಸೆಮೀಸ್ ಹಾದಿ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದ ಫಲಿತಾಂಶವನ್ನು ಅವಲಂಭಿಸಿದೆ.