ಬೆಂಗಳೂರು: ನಗರದಲ್ಲಿ ನಿನ್ನೆಯಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ರವರು ಇಂದು ಯಲಹಂಕ ವಲಯದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಯಲಹಂಕದ ಕೇಂದ್ರೀಯ ವಿಹಾರ್ ಅಪಾರ್ಟ್ ಮೆಂಟ್ಗೆ ಭೇಟಿ ನೀಡಿ ಪ್ರಸ್ತುತ ಸುಮಾರು 3 ಅಡಿ ನೀರು ನಿಂತಿದ್ದು, ಕೂಡಲೆ ಅಗತ್ಯ ಕ್ರಮಗಳನ್ನು ಕೈಗೊಂಡು ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸದ್ಯ ಇರುವ ನೀರುಗಾಲುವೆಯ ಪಕ್ಕ ಖಾಸಗಿ ಜಾಗದಲ್ಲಿ ಇಟಾಚಿ ಮೂಲಕ ಕಚ್ಚಾ ಡ್ರೈನ್ ಮಾಡಲಾಗುತ್ತಿದ್ದು, ಕೂಡಲೆ ಕೆಲಸ ಮುಗಿಸಿ ಕಚ್ಚಾ ಡ್ರೈನ್ ಮೂಲಕ ನೀರು ಹರಿದು ಹೊಗುವಂತೆ ಮಾಡಲಾಗುತ್ತಿದೆ. 02 ಅಗ್ನಿ ಶಾಮಕ ವಾಹನಗಳಿಂದ ಪಂಪ್ ಮೂಲಕ ನೀರನ್ನು ಹೊರ ಹಾಕಲಾಗುತ್ತಿದೆ. ನಿನ್ನೆ ಸಂಜೆ ಸಹಾಯ ಕೇಂದ್ರ (Help Desk) ತೆಗಯಲಾಗಿದ್ದು, ನಿವಾಸಿಗಳಿಗಳಿಗೆ ಕುಡಿಯುವ ನೀರು, ಹಾಲು, ಬ್ರೆಡ್, ಬಿಸ್ಕೆಟ್ ಇನ್ನಿತರೆ ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದೆ.
ಅಪಾಟ್ರ್ಮೆಂಟ್ ನಿಂದ ನಿವಾಸಿಗಳು ಹೊರ ಬರಲು ಹಾಗೂ ಒಳ ಹೋಗಲು 2 ಟ್ರ್ಯಾಕ್ಟರ್ ಗಳ ವ್ಯವಸ್ಥೆ ಮಾಡಲಾಗಿದೆ. ಯಲಹಂಕ ಕೆರೆಗೆ ಎರಡು ಕೋಡಿಗಳಿದ್ದು, ಉತ್ತರ, ದಕ್ಷಿಣದಲ್ಲಿ ಕೋಡಿಗಳು ಬರಲಿದೆ. ಕೇಂದ್ರೀಯ ವಿಹಾರ್ ಅಪಾಟ್ರ್ಮೆಂಟ್ ಕಡೆಗೆ ಉತ್ತರ ಕೋಡಿ ಬರಲಿದ್ದು, ಅಲ್ಲಿ ನೀರಿನ ಹರಿವನ್ನು ಕಡಿಮೆ ಮಾಡಬೇಕಿದೆ.
ಈ ಸಂಬಂಧ ದಕ್ಷಿಣದ ಕೋಡಿಯಲ್ಲಿ ನೀರಿನ ಹರಿವಿನ ಮಟ್ಟ ಹೆಚ್ಚಿಸಿದಾಗ ಉತ್ತರದ ಕೋಡಿಯಲ್ಲಿ ನೀರಿನ ಹರಿವಿನ ಮಟ್ಟ ಕಡಿಮೆಯಾಗಲಿದೆ. ಆದ್ದರಿಂದ ಕೂಡಲೆ ಸೂಕ್ತ ಕ್ರಮ ಕೈಗೊಳ್ಳ ಸೂಚನೆ ನೀಡಿದರು.20ಕ್ಕೂ ಹೆಚ್ಚು ಅಧಿಕಾರಿ/ಸಿಬ್ಬಂದಿಗಳು ಸ್ಥಳದಲ್ಲಿದ್ದು, ಸಮಸ್ಯೆಯನ್ನು ಬಗೆಹರಿಸುವಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಲೇಔಟ್ ಗೆ ಬರುವತ್ತಿರುವ ನೀರನ್ನು ತಡೆಯುವ ಸಲುವಾಗಿ ಹಿಂದೆಯೇ ಡೈವರ್ಷನ್ ಚಾನಲ್ ಮಾಡಲಾಗಿದ್ದು, ನೀರಿನ ಮಟ್ಟವನ್ನು ಸಾಕಷ್ಟು ತಡೆಯಲಾಗಿದೆ. ರಮಣಶ್ರೀ ಕ್ಯಾಲಿಫೋರ್ನಿಯಾ ಲೇಔಟ್ ನಲ್ಲಿ ನಿಂತಿರುವ ನೀರನ್ನು ಕೂಡಲೆ ತೆರವುಗೊಳಿಸಲು ಸೂಚನೆ ನೀಡಿದರು.
ಲೇಔಟ್ ನಿಂತಿರುವ ನೀರನ್ನು ಪಂಪ್ ಮೂಲಕ ತೆರವುಗೊಳಿಸಲಾಗುತ್ತಿದೆ.
ಮಳೆಯಾಗುತ್ತಿರುವ ಹಿನ್ನೆಲೆ ಮುಖ್ಯ ಆಯುಕ್ತರು ಇಂದು ಬೆಳಗ್ಗೆ ವರ್ಚುವಲ್ ಮೂಲಕ ಸಭೆ ನಡೆಸಿ, ಆಯಾ ವಲಯ ವ್ಯಾಪ್ತಿಯಲ್ಲಿ ಸಮಸ್ಯೆಯಾಗಿರುವ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಬೇಕು. ಸ್ಥಳದಲ್ಲಾಗಿರುವ ಸಮಸ್ಯೆ ಬಗ್ಗೆ ಅವಲೋಕಿಸಿ ಆ ಸ್ಥಳದಲ್ಲಿ ಶಾಶ್ವತ ಪರಿಹಾರ ಹುಡುಕಿ, ಇರುವ ಸಮಸ್ಯೆಯನ್ನು ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಲು ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಎಲ್ಲಾ ವಲಯಗಳ ನಿಯಂತ್ರಣ ಕೊಠಡಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ನಾಗರೀಕರಿಂದ ಬರುವ ದೂರುಗಳಿಗೆ ಕೂಡಲೆ ಸ್ಪಂದಿಸಲು ಸೂಚನೆ ನೀಡಿದರು.ಈ ವೇಳೆ ವಲಯ ಆಯುಕ್ತರಾದ ಕರೀಗೌಡ, ವಲಯ ಜಂಟಿ ಆಯುಕ್ತರಾದ ಮೊಹ್ಮದ್ ನಯೀಮ್ ಮೊಮಿಮ್, ಮುಖ್ಯ ಅಭಿಯಂತರರಾದ ರಂಗನಾಥ್, ಕಾರ್ಯಪಾಕಲಕ ಅಭಿಯಂತರರಾದ ಸುಧಾಕರ್ ರೆಡ್ಡಿ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.