ಮುಂಬೈ: ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ನಂತರ ಮಹಾರಾಷ್ಟ್ರ ವಿಧಾನಸಭೆಯ ಮೂರು ದಿನಗಳ ವಿಶೇಷ ಅಧಿವೇಶನ ಕರೆಯಲಾಗಿದ್ದು ಅದರ ಮೊದಲ ದಿನವಾದ ಇಂದು ಶನಿವಾರ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮಹಾರಾಷ್ಟ್ರ ವಿಧಾನಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಉಪಮುಖ್ಯಮಂತ್ರಿಗಳಾದ ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಸಹ ಮಹಾರಾಷ್ಟ್ರ ವಿಧಾನಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಇಂದು ಬೆಳಗ್ಗೆ 11 ಗಂಟೆಗೆ ಸದನದ ಕಲಾಪ ಆರಂಭವಾದ ಕೂಡಲೇ ಹಂಗಾಮಿ ಸ್ಪೀಕರ್ ಕಾಳಿದಾಸ್ ಕೊಲಂಬ್ಕರ್ ಅವರು ಮೂವರು ನಾಯಕರಿಗೆ ಶಾಸಕರಾಗಿ ಪ್ರಮಾಣ ವಚನ ಬೋಧಿಸಿದರು. ಹೊಸದಾಗಿ ಆಯ್ಕೆಯಾದ 287 ಶಾಸಕರಿಗೆ ಹಂಗಾಮಿ ಸ್ಪೀಕರ್ ಪ್ರಮಾಣ ವಚನ ಬೋಧಿಸಿದ್ದಾರೆ. ಈ ಮಧ್ಯೆ, ಶಿವಸೇನೆ (UBT) ನಾಯಕ ಆದಿತ್ಯ ಠಾಕ್ರೆ ಅವರು ಇವಿಎಂಗಳ ದುರ್ಬಳಕೆ ಮಾಡಲಾಗಿ ಎಂದು ಪ್ರತಿಭಟಿಸಿ ವಿಧಾನಸಭೆ ಅಧಿವೇಶನದ ಮೊದಲ ದಿನ ಪ್ರತಿಪಕ್ಷಗಳು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸುವುದಿಲ್ಲ ಎಂದು ಘೋಷಿಸಿ ಕಲಾಪ ಬಹಿಷ್ಕರಿಸಿದರು.
ಇಂದು ನಮ್ಮ (ಶಿವಸೇನೆ ಯುಬಿಟಿ) ಶಾಸಕರು ಪ್ರಮಾಣ ವಚನ ಸ್ವೀಕರಿಸುವುದಿಲ್ಲ ಈ ಬಾರಿಯ ಚುನಾವಣೆ ಗೆಲುವನ್ನು ಜನರು ಸಂತೋಷದಿಂದ ಜಯ ಎಂದು ಆಚರಿಸಲಿಲ್ಲ, ನಮಗೆ ವಿದ್ಯುನ್ಮಾನ ಮತಯಂತ್ರ ಬಗ್ಗೆ ಅನುಮಾನವಿದೆ ಎಂದು ಠಾಕ್ರೆ ಹೇಳಿದರು.
ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರು ಅಸೆಂಬ್ಲಿ ಚುನಾವಣಾ ಫಲಿತಾಂಶಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ, ಇವಿಎಂನ್ನು ಆಡಳಿತ ಪಕ್ಷ ದುರ್ಬಳಕೆ ಮಾಡಿಕೊಂಡಿದೆ ಎಂದು ಶಾಸಕರ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಪ್ರತಿಪಕ್ಷಗಳು ಇಂದು ಬಹಿಷ್ಕರಿಸಿದವು.
ನವೆಂಬರ್ 20 ರಂದು ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶಗಳನ್ನು ನವೆಂಬರ್ 23 ರಂದು ಘೋಷಿಸಲಾಯಿತು, ಇದರಲ್ಲಿ ಭಾರತೀಯ ಜನತಾ ಪಕ್ಷ (BJP), ಶಿವಸೇನೆ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ನೇತೃತ್ವದ (NCP) ಮಹಾಯುತಿ ಮೈತ್ರಿಕೂಟವು 288 ವಿಧಾನಸಭಾ ಸ್ಥಾನಗಳಲ್ಲಿ 230 ಸ್ಥಾನಗಳನ್ನು ಗೆಲ್ಲುವ ಮೂಲಕ ಅದ್ಭುತ ಜಯ ಕಂಡಿದೆ.
ಮೊನ್ನೆ ಡಿಸೆಂಬರ್ 5 ರಂದು ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿಯಾಗಿ, ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.