ಲಕ್ನೋ: ಮಹಾ ಕುಂಭಮೇಳದ ಸಿದ್ಧತೆಯ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸರ್ಕಾರವನ್ನು ಪ್ರಶ್ನಿಸಿರುವ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್, ಭದ್ರತೆ, ಸಾರಿಗೆ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಬೊಟ್ಟು ಮಾಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಯಾದವ್, ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಲು ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. 2025ರ ಪ್ರಯಾಗರಾಜ ಮಹಾ ಕುಂಭಮೇಳಕ್ಕೆ ಬಿಜೆಪಿ ಸರ್ಕಾರದಡಿಯಲ್ಲಿ ನಡೆಯುತ್ತಿರುವ ಸಿದ್ದತೆ ಇದು. ಕನಿಷ್ಠ ಪೊಲೀಸ್ ಇಲಾಖೆಯ ಕೆಲಸವನ್ನಾದರೂ ಬಹಳ ಹಿಂದೆಯೇ ಮುಗಿಸಬಹುದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಹಾದಾನಿ ಚಕ್ರವರ್ತಿ ಹರ್ಷವರ್ಧನ್ ಅವರ ಪ್ರತಿಮೆಯನ್ನು ತೆಗೆದುಹಾಕುವಲ್ಲಿ ಬಿಜೆಪಿ ಸರ್ಕಾರವು ಬಹಳ ಮುತುವರ್ಜಿ ವಹಿಸಿದೆ, ಆದರೆ ಅದೇ ವೇಗವನ್ನು ಆಡಳಿತ ನಿರ್ವಹಣೆಗೆ ಏಕೆ ತೋರಿಸುತ್ತಿಲ್ಲ ಎಂದು ಪ್ರಯಾಗರಾಜ್ ನ ನೊಂದ ಜನರು ಕೇಳುತ್ತಿದ್ದಾರೆ. ಮಹಾಕುಂಭ ಪ್ರದೇಶದ ಸುತ್ತಲಿನ ಸಾರಿಗೆ ಮತ್ತು ಸಂಚಾರದಂತಹ ಸ್ಥಳೀಯ ಸಮಸ್ಯೆಗಳ “ನಿರ್ಲಕ್ಷ್ಯ” ದ ಬಗ್ಗೆ ಯಾದವ್ ಪ್ರಶ್ನಿಸಿದ್ದಾರೆ.
ಕುಂಭಮೇಳದ ಸಿದ್ಧತೆ ಮಾಡುವಲ್ಲಿ ಸರ್ಕಾರ ಮತ್ತು ಸ್ಥಳೀಯ ಆಡಳಿತ ವಿಫಲವಾದರೆ, ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಸಹಾಯಕ್ಕೆ ಕಳುಹಿಸುತ್ತೇವೆ. ಯಾಕೆಂದರೆ ಬಿಜೆಪಿ ಕಾರ್ಯಕರ್ತರು ಹಣ ಸಂಪಾದನೆ ಮತ್ತು ಚುನಾವಣಾ ಕೆಲಸಗಳಲ್ಲಿ ಹೆಚ್ಚು ನಿರತರಾಗಿರುತ್ತಾರೆ ಎಂದು ಕುಟುಕಿದ್ದಾರೆ.