ಬೆಂಗಳೂರು: ಮಹಿಳಾ ಉದ್ಯಮಿಯೊಬ್ಬರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಡಿವೈಎಸ್ಪಿ ಕನಕಲಕ್ಷ್ಮಿ ಬಿ.ಎಂ ಅವರ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನಗರದ ವಿಶೇಷ ನ್ಯಾಯಾಲಯ ಶುಕ್ರವಾರ ತಿರಸ್ಕರಿಸಿದೆ.
ಕನಕ ಲಕ್ಷ್ಮಿ ಅವರು ಜಾಮೀನು ಅರ್ಜಿಯಲ್ಲಿ ತಮ್ಮ ವಿರುದ್ಧ ಮಾಡಿರುವ ಆರೋಪ ಸುಳ್ಳು ಎಂದಿದ್ದಾರೆ, ತಾನು ನಿರಪರಾಧಿಯಾಗಿದ್ದು, ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲಾಗಿದೆ ಎಂದಿದ್ದಾರೆ. ಪೊಲೀಸರು ತಮ್ಮನ್ನು ಬಂಧಿಸುವ ಆತಂಕದಿಂದ ಕನಕ ಲಕ್ಷ್ಮಿ ನ್ಯಾಯಾಲಯದ ಮೆಟ್ಟಿಲೇರಿದ್ದು, ತನ್ನ ಮುಖ್ಯ ಜಾಮೀನು ಅರ್ಜಿ ಇತ್ಯರ್ಥವಾಗುವವರೆಗೆ ಮಧ್ಯಂತರ ಜಾಮೀನು ನೀಡುವಂತೆ ಕೋರಿದ್ದಾರೆ. 23 ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಮೂರ್ತಿ ಕೆ ಎಂ ರಾಧಾಕೃಷ್ಣ ಕನಕ ಲಕ್ಷ್ಮಿ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ. ತನಿಖೆ ಆರಂಭದ ಹಂತದಲ್ಲಿದೆ. ಅಪರಾಧಗಳ ಸ್ವರೂಪ ಮತ್ತು ಗಂಭೀರತೆ, ಪ್ರಕರಣದ ಸಂಗತಿಗಳು ಮತ್ತು ಸಂದರ್ಭಗಳನ್ನು ಪರಿಗಣನೆಗೆ ತೆಗೆದುಕೊಂಡ ನಂತರ, ಮಧ್ಯಂತರ ಜಾಮೀನಿನ ಮನವಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ನವೆಂಬರ್ 22, 2024 ರಂದು, ಬನಶಂಕರಿ ಪೊಲೀಸರು ಕನಕ ಲಕ್ಷ್ಮಿ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7 (ಎ) ಮತ್ತು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 108 ರ ಅಡಿಯಲ್ಲಿ ಜೀವಾ ಅವರ ಸಹೋದರಿ ಸಂಗೀತಾ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ದೂರಿನ ಪ್ರಕಾರ, ಕನಕ ಲಕ್ಷ್ಮಿ ಅವರು ನವೆಂಬರ್ 14 ಮತ್ತು 21, 2024 ರ ನಡುವೆ ಜೀವಾ ಅವರನ್ನು ವಿಚಾರಣೆಗೆ ಕರೆದರು, ಈ ಸಂದರ್ಭದಲ್ಲಿ ಅವರು ಉದ್ಯಮಿಗೆ ತೀವ್ರ ಕಿರುಕುಳ ನೀಡಿ 25 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು ಹೀಗಾಗಿ ನವೆಂಬರ್ 22 ರ ಬೆಳಿಗ್ಗೆ ಜೀವಾ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಆರೋಪಿಸಲಾಗಿದೆ. ಜೀವಾ 13 ಪುಟಗಳ ಡೆತ್ ನೋಟ್ ಬರೆದಿಟ್ಟುಹೋಗಿದ್ದಾರೆ.ಪಬ್ಲಿಕ್ ಪ್ರಾಸಿಕ್ಯೂಟರ್ ಆಕ್ಷೇಪಣೆಗಳನ್ನು ಸಲ್ಲಿಸಲು ನ್ಯಾಯಾಲಯವು ಮುಖ್ಯ ಜಾಮೀನು ಅರ್ಜಿಯ ವಿಚಾರಣೆಯನ್ನು ಡಿಸೆಂಬರ್ 5 ಕ್ಕೆ ಮುಂದೂಡಿದೆ.