ರಾಮನಗರ: ಆಧುನಿಕತೆಯ ಬೆಳಕಿನಲ್ಲಿರುವ ನಾವು ಭ್ರಮೆಯಲ್ಲಿ ಬದುಕುತಿದ್ದು, ಈ ಬೆಳಕಿನಲ್ಲಿಯೇ ನಾವು ಕುಳಿತಿರುವ ರೆಂಬೆಯನ್ನು ನಾವೇ ಕತ್ತರಿಸಿಕೊಳ್ಳುತ್ತಿದ್ದೇವೆ. ಮನುಷ್ಯನ ಬದುಕಿಗೆ ಆಧುನಿಕತೆ ಜೊತೆಗೆ, ಆಧ್ಯಾತ್ಮ ಮತ್ತು ಜನಪದವೂ ಬೇಕಿದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಹೊರವಲಯದ ಜಾನಪದ ಲೋಕದಲ್ಲಿ ಜಾನಪದ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ಎರಡು ದಿನಗಳ ಮಹಿಳಾ ಜಾನಪದ ಲೋಕೋತ್ಸವ-2025 ಸಮಾರೋಪ ಸಮಾರಂಭದಲ್ಲಿ ವಿವಿಧ ಜಾನಪದ ಕಲಾ ಪ್ರಕಾರಗಳ ಸಾಧಕರು ಹಾಗೂ ವಿದ್ವಾಂಸರಿಗೆ ಜಾನಪದ ಲೋಕ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ನಮ್ಮ ಮೂಲ ಇರುವುದೇ ಜನಪದದಲ್ಲಿ ಎಂಬುದನ್ನು ಮರೆಯಬಾರದು. ಅಕ್ಷರ ಕಾಣದ ತಮ್ಮ ತಾಯಂದಿರು ಜಾನಪದದ ಮೂಲಕ ಸಾಹಿತ್ಯವನ್ನು ಹಿಡಿದಿಟ್ಟಿದ್ದರು. ಅಳಿಸಲಾಗದ ಜ್ಞಾನ ಎಂದರೆ ಲಿಪಿ. ಅಂದರೆ ಜ್ಞಾನ. ಈ ಜ್ಞಾನವನ್ನು ಜನಪದದ ಮೂಲಕ ಹಿಡಿದಿಟ್ಟಿದ್ದರು. ಇಂತಹ ಜ್ಞಾನವನ್ನು ಲಿಪಿ ಹೊಂದಿರುವ ಶಿಷ್ಟ ಸಾಹಿತ್ಯದಲ್ಲಿ ಕಾಣಲು ಸಾಧ್ಯವಿಲ್ಲ ಎಂದರು.
ನಾವು ಹೊರಗೆ ಶ್ರೀಮಂತರಾಗುತ್ತಿದ್ದೇವೆ. ಒಳಗೆ ಬಡವರಾಗುತ್ತಿದ್ದೇವೆ. ಕಸ್ತೂರಿ ಮೃಗ ತನ್ನೊಳಗಿನ ಸುಗಂದವನ್ನು ಅರಿಯದೆ ಬೇರೆಡೆ ಹುಡುಕುವಂತೆ, ಆಧುನಿಕತೆಯ ಭರಾಟೆಯಲ್ಲಿ ನಾವು ಸಹ ನಮ್ಮತನ ಕಳೆದುಕೊಳ್ಳುತ್ತಿದ್ದೇವೆ. ಜಾನಪದ ಇದಕ್ಕೆ ಉತ್ತರ ನೀಡಲಿದೆ. ಅದನ್ನು ಬೆಳಸುವ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಬೇಕಿದೆ ಎಂದರು.
ಆಧುನಿಕತೆಯ ಬೆಳಕಿನಡಿ ಜಾನಪದದ ರಂಭೆಯನ್ನು ಕಡಿಯುವ ಕೆಲಸ ಮಾಡಲಾಗುತ್ತಿದೆ. ಆಧುನಿಕತೆ ಬೆಳಕಿನಲ್ಲಿ ಜಗತ್ತು ಇರುವ ರೀತಿ ಕಾಣುತ್ತಿಲ್ಲ. ಹೇಗಿದೆಯೋ ಹಾಗೆ ಕಾಣಿಸದಿಧ್ದರೆ ಅದು ಆಧುನಿಕತೆ. ಇದರ ನಡುವೆಯೇ ನಮ್ಮನ್ನು ನಾವು ಕಾಪಿಟ್ಟುಕೊಳ್ಳಲು ಬೇಕಿರುವ ಜನಪದವನ್ನು ಸಂರಕ್ಷಣೆ ಮಾಡಿ, ಬೆಳಸಿಕೊಂಡು ಹೋಗಬೇಕಿದೆ. ಆಗ ನಮ್ಮ ಕಲೆಗೆ ಎಂದೂ ಧಕ್ಕೆ ಬರುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದೆಹಲಿ ಕನ್ನಡ ಸಂಘದ ಅಧ್ಯಕ್ಷ ನಾಗರಾಜು, ದೇಶದ ರಾಜಧಾನಿಯಲ್ಲಿರುವ ನಮ್ಮ ಸಂಘವು 75ನೇ ವರ್ಷಕ್ಕೆ ಕಾಲಿಟ್ಟಿದೆ. ದೆಹಲಿ ಪಕ್ಕದ ನೋಯ್ಡಾದಲ್ಲಿ ಎರಡು ಎಕರೆ ಜಾಗದಲ್ಲಿ ಸಂಘದಿಂದ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಯುಪಿಎಸ್.ಸಿ ಪರೀಕ್ಷೆಗೆ ತಯಾರಾಗುವವರ ರಾಜ್ಯದ ವಿದ್ಯಾರ್ಥಿಗಳಿಗೆ ಅಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಪರಿಷತ್ತಿನ ಅಧ್ಯಕ್ಷ ಪ್ರೊ.ಹಿ.ಚಿ. ಬೋರಲಿಂಗಯ್ಯ, ರಾಜಕಾರಣಿಗಳು ತಮ್ಮ ಇಕ್ಕಟ್ಟು ಮತ್ತು ಬಿಕ್ಕಟ್ಟಿನ ಕಾರಣಕ್ಕಾಗಿ ಬಂದಿಲ್ಲ. ಆದರೆ, ಸ್ವಾಮೀಜಿ ಮತ್ತು ವಿದ್ವಾಂಸರು ಬಂದು ಎರಡು ದಿನಗಳ ಲೋಕೋತ್ಸವದ ಸಂಭ್ರಮಕ್ಕೆ ಮೆರಗು ತಂದಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದರು.
ಪರಿಷತ್ತಿನಿಂದ ಜಾನಪದ ಕಲಾ ಪ್ರಕಾರಗಳು ಮತ್ತು ಕಲೆಗಳ ಕುರಿತು ಕನ್ನಡದ ಜೊತೆಗೆ ಇಂಗ್ಲಿಷ್ ನಲ್ಲೂ ಪುಸ್ತಕ ಪ್ರಕಟಣೆ ಮಾಡಲು ಯೋಜನೆ ರೂಪಿಸಲಾಗಿದೆ. ಆ ಮೂಲಕ, ನಮ್ಮ ನಾಡಿನ ಜಾನಪದದ ಕಂಪನ್ನು ವಿಶ್ವದಾದ್ಯಂತ ಹರಡಲು ಸಿದ್ದರಾಗಿದ್ದೇವೆ ಎಂದರು. ಬುಡಕಟ್ಟು ಕಲಾವಿದೆ ರತ್ನಮ್ಮ, ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ, ಪರಿಷತ್ತಿನ ಆಡಳಿತಾಧಿಕಾರಿ ನಂದಕುಮಾರ ಹೆಗಡೆ, ಜಾನಪದ ಲೋಕದ ಕಾರ್ಯನಿರ್ವಾಹಕಿ ಸರಸವಾಣಿ, ಕ್ಯುರೇಟರ್ ಡಾ. ರವಿ ಯು.ಎಂ. ಇದ್ದರು.