ಮೈಸೂರು: ಅಮೆರಿಕದ ಜೆಸ್ಸಿ ಆಯನಿ ಭಾನುವಾರ ಇಲ್ಲಿ ಮುಕ್ತಾಯಗೊಂಡ ಮೈಸೂರು ಓಪನ್ ಮಹಿಳೆಯರ ಐಟಿಎಫ್ ಟೆನಿಸ್ ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಇಲ್ಲಿನ ಚಾಮರಾಜಪುರಂನ ಮೈಸೂರು ಟೆನಿಸ್ ಕ್ಲಬ್(ಎಂಟಿಸಿ) ಅಂಗಳದಲ್ಲಿ ಬರೋಬ್ಬರಿ ಎರಡೂವರೆ ಗಂಟೆಕಾಲ ನಡೆದ ಫೈನಲ್ ಹಣಾಹಣಿಯಲ್ಲಿ ಎರಡನೇ ಶ್ರೇಯಾಂಕದ ಆಟಗಾರ್ತಿ ಜೆಸ್ಸಿ 3-6, 6-3, 7-6 ( 8-6)ರಿಂದ ಅಗ್ರ ಶ್ರೇಯಾಂಕದವರಾದ, ಭಾರತದ ಬಿ.ಆರ್. ಶ್ರೀವಲ್ಲಿವಿರುದ್ಧ ಜಯಿಸಿದರು. ಜೆಸ್ಸಿ ಶನಿವಾರ ಟೂರ್ನಿಯ ಡಬಲ್ಸ್ ವಿಭಾಗದಲ್ಲೂ ರಿಯಾ ಭಾಟಿಯಾ ಜೊತೆಗೂಡಿ ಪ್ರಶಸ್ತಿ ಗೆದ್ದಿದ್ದರು.
ಶ್ರೀವಲ್ಲಿ ಮೊದಲ ಸೆಟ್ನಲ್ಲಿ ಮುನ್ನಡೆ ಸಾಧಿಸಿದ್ದ ವೇಳೆ ಪಂದ್ಯಕ್ಕೆ ಮಳೆ ಅಡ್ಡಿಯಾಯಿತು. ಮತ್ತೆ ಪಂದ್ಯ ಆರಂಭದೊಂದಿಗೆ ಜೆಸ್ಸಿ ತಮ್ಮ ಆಟದ ವೈಖರಿಯನ್ನು ಬದಲಿಸಿಕೊಂಡರು. ಮೊದಲ ಸೆಟ್ ಸೋತರೂ ಎರಡನೇ ಸೆಟ್ನಲ್ಲಿ ತಿರುಗೇಟು ನೀಡಿದರು. ಎದುರಾಳಿಯ ಬಲವಾದ ಹೊಡೆತಗಳಿಗೆ ತಾಳ್ಮೆಯಿಂದ ಉತ್ತರ ನೀಡಿದ ಜೆಸ್ಸಿ, ಆಕೆಯೇ ತಪ್ಪೆಸಗುವವರೆಗೂ ಕಾದರು.