ಬೆಂಗಳೂರು: ಮಹಿಳೆಗೆ ವಂಚಿಸಿದ ಆರೋಪದ ಮೇಲೆ ಆಂಧ್ರಪ್ರದೇಶ ಮೂಲದ ಸಾಫ್ಟ್ವೇರ್ ಇಂಜಿನಿಯರ್ ವಿರುದ್ಧ ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟೆಕ್ ಪಾರ್ಕ್ನಲ್ಲಿ ಬ್ಯಾಂಕ್ನಲ್ಲಿ ಕೆಲಸ ಮಾಡುವ ದೊಡ್ಡ ತೋಗೂರಿನ ನಿವಾಸಿ ದಿವ್ಯಾ (32) (ಹೆಸರು ಬದಲಿಸಲಾಗಿದೆ) ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸರು ಆಂಧ್ರಪ್ರದೇಶ ಕಾಕಿನಾಡ ಮೂಲದ ಟೆಕ್ಕಿ ಕೆ.ಆರವ್ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
2017ರಲ್ಲಿ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಆರವ್ ಪರಿಚಯವಾಗಿದ್ದ. 2019ರಲ್ಲಿ ನಮ್ಮಿಬ್ಬರ ನಡುವೆ ಪ್ರೀತಿ ಶುರುವಾಗಿತ್ತು. ಆದರೆ, ಅದೇ ವರ್ಷ ಆತ ಬೇರೊಬ್ಬ ಮಹಿಳೆಯೊಂದಿಗೆ ವಿವಾಹವಾಗಿದ್ದ. ಬಳಿಕ ಪತ್ನಿಗೆ ವಿಚ್ಛೇದನ ನೀಡಿ ನನ್ನನ್ನು ಮದುವೆಯಾಗುವುದಾಗಿ ನನ್ನನ್ನು ನಂಬಿಸಿದ್ದ. 2021ರಲ್ಲಿ ಆತನ ಪತ್ನಿ ಗರ್ಭಿಣಿಯಾದ ಬಳಿಕ ನನ್ನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದ. ಇದಾದ 2 ವರ್ಷಗಳ ಬಳಿಕ ಮತ್ತೆ ನಾವಿಬ್ಬರೂ ಭೇಟಿಯಾಗಿದ್ದೆವು.
ಶೀಘ್ರದಲ್ಲೇ ಪತ್ನಿಗೆ ವಿಚ್ಛೇದನ ನೀಡುವುದಾಗಿ ನಂಬಿಸಿ, ದೈಹಿಕ ಸಂಪರ್ಕ ಬೆಳೆಸಿದ್ದ. ಆಗಾಗ್ಗೆ ನನ್ನಿಂದ ಹಣಕಾಸನ್ನೂ ಪಡೆಯುತ್ತಿದ್ದ. ಕೋಲ್ಕತಾದ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸಿದ್ದ. ಮುಂದೆ ಸಮಸ್ಯೆಯಾಗುತ್ತದೆ ಎಂದು ತಿಳಿದು ಕಳೆದ ವಾರ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿರುವ ನನ್ನ ಫ್ಲ್ಯಾಟ್’ಗೆ ಬಂದು ಫೋನ್ ನಲ್ಲಿದ್ದ ಫೋಟೋ ಹಾಗೂ ವಿಡಿಯೋಗಳನ್ನು ಡಿಲೀಟ್ ಮಾಡಿದ್ದ. ಫ್ಲ್ಯಾಟ್ ನಿಂದ ಹೊರ ಹೋಗುವ ವೇಳೆ ನನ್ನ ಮೇಲೆ ಹಲ್ಲೆ ಮಾಡಿದ್ದ. ಅಪಾರ್ಟ್ಮೆಂಟ್ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ದೂರು ಸಂಬಂಧ ಪ್ರತಿಕ್ರಿಯೆ ನೀಡಿದ ಪೊಲೀಸ್ ಅಧಿಕಾರಿಯೊಬ್ಬರು, ಟೆಕ್ಕಿ ಬಂಧನಕ್ಕಾಗಿ ಕಾಕಿನಾಡಕ್ಕೆ ಪೊಲೀಸರ ತಂಡವನ್ನು ಕಳುಹಿಸಲಾಗುವುದು. ಆರೋಪಿಯ ವಿರುದ್ಧ ಮಹಿಳೆಯ ಒಪ್ಪಿಗೆಯಿಲ್ಲದೆ ಗರ್ಭಪಾತ ಮಾಡಿದ್ದಕ್ಕೆ (ಐಪಿಸಿ 313), ವಂಚನೆ (ಐಪಿಸಿ 420) ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.