ಬಂಗಾರಪೇಟೆ: ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಪ್ರಗತಿ ಸಾಧಿಸುತ್ತಿದ್ದು ಇನ್ನಷ್ಟು ಮಹಿಳೆಯರಿಗೆ ಉತ್ತೇಜನ ನೀಡಲು ನಮ್ಮ ಸರಕಾರ ಸದಾ ಸಿದ್ಧ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ತಿಳಿಸಿದರು.
ಪಟ್ಟಣದ ಎಸ್.ಎನ್.ರೆಸಾರ್ಟ್ನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದಿಂದ ಸರ್ಕಾರಿ ಮಹಿಳಾ ನೌಕರರಿಗೆ ಆರೋಗ್ಯ ಮತ್ತು ಕಾನೂನು ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಹಿಂದೆ ಇದ್ದ ಕೇಂದ್ರ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗಾಗಿ ಅನೇಕ ಭದ್ರತೆ ಕಾನೂನನ್ನು ಕಲ್ಪಿಸಿದ್ದು ಅದೇ ನಿಟ್ಟಿನಲ್ಲಿ ನಮ್ಮ ಸಿದ್ದರಾಮಯ್ಯ ಸರ್ಕಾರವು ಮಹಿಳೆಯರಿಗೆ ಅನೇಕ ಭಾಗ್ಯಗಳು ತಂದು ಮಹಿಳೆಯರ ಸಬಲೀಕರಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದೆ ಎಂದರು.
ಸರ್ಕಾರವು ಮಹಿಳೆಯರಿಗಾಗಿ ಭಾಗ್ಯಗಳ ರೂಪದಲ್ಲಿ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡುತ್ತಿದ್ದು ಅದೇ ರೀತಿಯಲ್ಲಿ ಉಚಿತ ಬಸ್ ಪ್ರಯಾಣ ಹಾಗೂ ಉಚಿತ ವಿದ್ಯುತ್ ನೀಡುತ್ತಿದ್ದು ಇದರಿಂದ ಮಹಿಳೆಯರು ಸ್ವಾಲಂಬಿ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗಿದೆ ಎಂದರು.ಇವತ್ತಿಗೆ ನಮ್ಮ ದೇಶದ ಆರ್ಥಿಕತೆಯಲ್ಲಿ ಮಹಿಳೆಯರ ಪಾಲು ಕೂಡ ಅರ್ಧಕ್ಕಿಂತಲೂ ಹೆಚ್ಚು ಇದೆ ಎಂಬುದನ್ನು ನಾವು ತಿರಸ್ಕರಿಸುವಂತಿಲ್ಲ.
ಪ್ರಸ್ತುತ ಸಮಾಜದಲ್ಲಿ ಎಲ್ಲಾ ವಲಯದಲ್ಲಿಯೂ ಮಹಿಳೆಯರು ತಮ್ಮನ್ನು ತಾವು ತೊಡಗಿಸಿಕೊಂಡು ಪುರುಷರಷ್ಟೇ ಸರಿಸಮನಾಗಿ ದುಡಿಯುತ್ತಿದ್ದಾರೆ.
ಗಾರ್ಮೆಂಟ್ಸ್ ಫ್ಯಾಕ್ಟರಿಗಳು, ಪೆಟ್ರೋಲ್ ಬಂಕ್ ಗಳು, ಕೃಷಿ ವಲಯ, ಅಂಗನವಾಡಿ ಆಶಾ ಕಾರ್ಯಕರ್ತೆಯರು, ವೈದ್ಯರುಗಳು, ನರ್ಸ್ಗಳು, ಪೌರಕಾರ್ಮಿಕ ಮಹಿಳೆಯರು ಹೀಗೆ ಹೇಳುತ್ತಾ ಹೋದರೆ ಪ್ರತಿಯೊಂದು ಕ್ಷೇತ್ರದಲ್ಲಿ ಕೂಡ ಮಹಿಳೆಯರ ಪಾತ್ರವಿದೆ ಎಂಬುದು ಅರಿವಾಗುತ್ತದೆ. ಆದರೆ ಅವರ ಪರಿಶ್ರಮಕ್ಕೆ ಸಮನಾದ ಪ್ರತಿಫಲ ಮಾತ್ರ ಇಂದಿಗೂ ಕೂಡ ದೊರೆಯುತ್ತಿಲ್ಲ.
ಸಮಾನ ಕೆಲಸಕ್ಕೆ ಸಮಾನ ವೇತನ ಎಂಬುದು ಈಗಲೂ ಕೂಡ ಕನಸಾಗಿಯೇ ಉಳಿದಿದೆ. ಆರ್ಥಿಕತೆಯ ಬಂಡವಾಳದ ಮಾಲೀಕತ್ವದ ಜಾಗಗಳಲ್ಲಿ ಪುರುಷರೇ ಹೆಚ್ಚಾಗಿ ಪ್ರಾಬಲ್ಯವನ್ನು ಸಾಧಿಸಿದ್ದು ಮಹಿಳೆಯರ ಸಂಖ್ಯೆ ಬಹಳ ಕಡಿಮೆ ಇದೆ.ಕಳೆದ ಮೂರು ವರ್ಷಗಳಲ್ಲಿ ಕೊರೋನಾದಂತಹ ಕೆಟ್ಟಕಾಲ ಬಂದೊದಗಿದ ಸಂದರ್ಭದಲ್ಲಿ ಮಹಿಳಾ ಸಮುದಾಯವು ಬಹಳ ಪ್ರಮುಖ ಪಾತ್ರ ವಹಿಸಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಉಪನಿರ್ದೇಶಕ ಕೃಷ್ಣಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ, ತಾಲ್ಲೂಕು ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್, ಕ್ಷೇತ್ರ ಸಮನ್ವಯ ಅಧಿಕಾರಿ ಶಶಿಕಲಾ, ಡಿ.ಕೆ.ಹಳ್ಳಿ ಜಿಲ್ಲಾ ಪಂಚಾಯಿತಿ ಆಕಾಂಕ್ಷೆ ಅಭ್ಯರ್ಥಿ ಗೋಪಾಲ್ ರೆಡ್ಡಿ, ಬೂದಿಕೋಟೆ ಜಿಲ್ಲಾ ಪಂಚಾಯಿತಿ ಆಕಾಂಕ್ಷೆ ಅಭ್ಯರ್ಥಿ ಎ.ಬಾಬು, ಮುಖಂಡರಾದ ವಿ.ಬಾಬು, ಶಿಕ್ಷಕರ ಸಂಘದ ಅಧ್ಯಕ್ಷರಾದ ಆಂಜನೇಯಗೌಡ, ಟಿಎಚ್ಒ ಡಾ|| ಸುನಿಲ್ ಸೇರಿದಂತೆ ಮಹಿಳಾ ನೌಕರರ ಹಾಗೂ ಶಿಕ್ಷಕರ ವೃಂದದವರು ಭಾಗವಹಿಸಿದ್ದರು.