ಕೊಚ್ಚಿ: ಮಹಿಳೆಯ ‘ದೇಹ ರಚನೆ’ ಕುರಿತಾದ ಟೀಕೆಗಳೂ ಕೂಡ ಲೈಂಗಿಕ ಕಿರುಕುಳವಾಗಿದ್ದು, ಇದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಕೇರಳ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಕೇರಳ ರಾಜ್ಯ ವಿದ್ಯುತ್ ಮಂಡಳಿ (ಕೆಎಸ್ಇಬಿ) ಮಾಜಿ ಉದ್ಯೋಗಿಯೊಬ್ಬರು ಸಲ್ಲಿಸಿದ್ದ ಮನವಿಯನ್ನು ವಜಾಗೊಳಿಸುವ ಸಂದರ್ಭದಲ್ಲಿ ನ್ಯಾಯಮೂರ್ತಿ ಎ ಬದರುದ್ದೀನ್ ಅವರು ಈ ಮಹತ್ವದ ತೀರ್ಪು ನೀಡಿದ್ದಾರೆ. ತನ್ನ ವಿರುದ್ಧ ಅದೇ ಸಂಸ್ಥೆಯ ಮಹಿಳಾ ಸಿಬ್ಬಂದಿಯೊಬ್ಬರು ದಾಖಲಿಸಿರುವ ಲೈಂಗಿಕ ಕಿರುಕುಳ ಪ್ರಕರಣವನ್ನು ರದ್ದುಗೊಳಿಸುವಂತೆ ಕೇರಳ ರಾಜ್ಯ ವಿದ್ಯುತ್ ಮಂಡಳಿ (ಕೆಎಸ್ಇಬಿ) ಮಾಜಿ ಉದ್ಯೋಗಿಯೊಬ್ಬರು ಅರ್ಜಿ ಸಲ್ಲಿಸಿದ್ದರು.
ಆರೋಪಿ 2013 ರಿಂದ ತನ್ನ ವಿರುದ್ಧ ಅಸಭ್ಯ ಪದಗಳನ್ನು ಬಳಸಿದ್ದಾರೆ ಮತ್ತು ನಂತರ 2016-17 ರಲ್ಲಿ ಆಕ್ಷೇಪಾರ್ಹ ಸಂದೇಶಗಳು ಮತ್ತು ದೂರವಾಣಿ ಕರೆ ಮಾಡಿ ಕಿರುಕುಳು ನೀಡುತ್ತಿದ್ದರು ಎಂದು ಮಹಿಳೆ ತನ್ನ ದೂರಿನಲ್ಲಿ ಆರೋಪಿಸಿದ್ದರು. ಅಲ್ಲದೆ ಆತನ ವಿರುದ್ಧ ಕೆಎಸ್ಇಬಿ ಮತ್ತು ಪೊಲೀಸರಿಗೆ ದೂರು ನೀಡಿದರೂ ಆತ ಆಕೆಗೆ ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸುತ್ತಲೇ ಇದ್ದ ಎಂದು ಮಹಿಳೆ ದೂರಿದ್ದಾರೆ.
ಆಕೆಯ ದೂರುಗಳ ನಂತರ, ಆರೋಪಿಯ ವಿರುದ್ಧ ಐಪಿಸಿಯ ಸೆಕ್ಷನ್ 354 ಎ (ಲೈಂಗಿಕ ಕಿರುಕುಳ) ಮತ್ತು 509 (ಮಹಿಳೆಗೆ ನಮ್ರತೆಯನ್ನು ಅವಮಾನಿಸುವುದು) ಮತ್ತು ಸೆಕ್ಷನ್ 120 (ಒ) (ಅನಪೇಕ್ಷಿತ ಕರೆ, ಪತ್ರ, ಮೂಲಕ ಯಾವುದೇ ಸಂವಹನದ ಮೂಲಕ ತೊಂದರೆ ಉಂಟುಮಾಡುವ) ಕೇರಳ ಪೊಲೀಸ್ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣವನ್ನು ರದ್ದುಗೊಳಿಸುವಂತೆ ಆರೋಪಿಯು ಕೇರಳ ಹೈಕೋರ್ಟ್ ಮೆಟ್ಟಿೇಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ‘ಉತ್ತಮವಾದ ದೇಹ ರಚನೆಯನ್ನು ಹೊಂದಿದ್ದಾರೆ ಎಂಬ ಉಲ್ಲೇಖವನ್ನು ಐಪಿಸಿಯ ಸೆಕ್ಷನ್ 354A ಮತ್ತು 509 ಮತ್ತು ಕೇರಳ ಪೊಲೀಸ್ ಕಾಯಿದೆಯ ಸೆಕ್ಷನ್ 120(o) ವ್ಯಾಪ್ತಿಯಲ್ಲಿ ಲೈಂಗಿಕ ಟೀಕೆಗಳಿಗೆ ಕಾರಣವಾಗುವುದಿಲ್ಲ ಎಂದು ಹೇಳಿದ್ದಾರೆ.
ಮತ್ತೊಂದೆಡೆ, ಪ್ರಾಸಿಕ್ಯೂಷನ್ ಮತ್ತು ಮಹಿಳೆ ಆರೋಪಿಯ ಕರೆಗಳು ಮತ್ತು ಸಂದೇಶಗಳು ತನಗೆ ಕಿರುಕುಳ ನೀಡುವ ಉದ್ದೇಶದಿಂದ ಲೈಂಗಿಕ ಬಣ್ಣದ ಟೀಕೆಗಳನ್ನು ಹೊಂದಿದ್ದವು ಮತ್ತು ಇದು ಹೆಣ್ಣಿನ ನಮ್ರತೆಯನ್ನು ಆಕ್ರೋಶಗೊಳಿಸುತ್ತವೆ ಎಂದು ವಾದಿಸಿದರು.
ಪ್ರಾಸಿಕ್ಯೂಷನ್ನ ವಾದಗಳಿಗೆ ಸಮ್ಮತಿಸಿದ ಕೇರಳ ಹೈಕೋರ್ಟ್, ಐಪಿಸಿಯ ಸೆಕ್ಷನ್ 354 ಎ ಮತ್ತು 509 ಮತ್ತು ಕೇರಳ ಪೊಲೀಸ್ ಕಾಯ್ದೆಯ ಸೆಕ್ಷನ್ 120 (ಒ) ಅಡಿಯಲ್ಲಿ ಅಪರಾಧಗಳನ್ನು ಆಕರ್ಷಿಸುವ ಅಂಶಗಳನ್ನು ಪ್ರಾಥಮಿಕವಾಗಿ ರೂಪಿಸಲಾಗಿದೆ ಎಂದು ಹೇಳಿದೆ.