ತುಮಕೂರು: ಜಿಲ್ಲೆಯ ಬೆಳ್ಳಾವಿ ಕ್ಷೇತ್ರದ ಕಾಂಗ್ರೆಸ್ನ ಮಾಜಿ ಶಾಸಕ ಆರ್ ನಾರಾಯಣ ಅವರು ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 81 ವರ್ಷದ ಆರ್.ನಾರಾಯಣ ಅವರು ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ವರದಿಯಾಗಿದೆ.
ಕಾಂಗ್ರೆಸ್ನ ಟಿಕೆಟ್ನಲ್ಲಿ ಸ್ಪರ್ಧಿಸಿ ಬೆಳ್ಳಾವಿ ಕ್ಷೇತ್ರವನ್ನು ಒಟ್ಟು ಮೂರು ಬಾರಿ ಪ್ರತಿನಿಧಿಸಿದ್ದರು. ಇತ್ತೀಚೆಗೆ ಸಾವನ್ನಪ್ಪಿದ ಕರ್ನಾಟಕ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರ ಅಧಿಕಾರವಧಿಯಲ್ಲಿ ನಾರಾಯಣ ಅವರು ಹೌಸಿಂಗ್ ಬೋರ್ಡ್ ಚೇರ್ಮನ್ ಆಗಿದ್ದರು. ನಾರಾಯಣ ಅವರ ಅಂತಿಮ ದರ್ಶನಕ್ಕೆ ಗಾಂಧಿನಗರದ ನಿವಾಸದಲ್ಲಿ ಅವಕಾಶ ಮಾಡಿಕೊಡಲಾಗಿದೆ. ನಾರಾಯಣ್ ಅವಿವಾಹಿತರಾಗಿದ್ದು, ಒಬ್ಬಂಟಿಯಾಗಿ ನಗರದ ಸಿಎಸ್ಐ ಲೇಔಟ್ನಲ್ಲಿರುವ ಮನೆಯಲ್ಲಿ ವಾಸವಿದ್ದರು.
ಕಾಂಗ್ರೆಸ್ ಮಾಜಿ ಶಾಸಕರಾದ ಆರ್.ನಾರಾಯಣ ಅವರ ನಿಧನಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ. ಆರ್.ನಾರಾಯಣ ಅವರ ನಿಧನದ ಸುದ್ದಿ ಕೇಳಿ ತೀವ್ರ ಬೇಸರವಾಗಿದೆ. ಕೆಂಗಲ್ ಹನುಮಂತಯ್ಯ ಅವರ ಅನುಯಾಯಿಯಾಗಿ ಕಾಂಗ್ರೆಸ್ ಪಕ್ಷದ ಭದ್ರ ಬುನಾದಿಗೆ ಶ್ರಮಿಸಿದವರು. ತಮ್ಮ ಅಚ್ಚುಕಟ್ಟುತನದಿಂದ ಕೂಡಿದ ಕೆಲಸಕ್ಕೆ ಹೆಸರಾಗಿದ್ದವರು. ತುಮಕೂರು ಜಿಲ್ಲೆಯಲ್ಲಿ ಪಕ್ಷದ ಪ್ರಮುಖ ನಾಯಕರಾಗಿದ್ದರು. ಕಾಂಗ್ರೆಸ್ ಪಕ್ಷದ ಏಳಿಗೆಗೆ ಇವರ ಕೊಡುಗೆ ಅಪಾರ. ಸರಳ, ಸಜ್ಜನಿಕೆಯ ವ್ಯಕ್ತಿತ್ವ ದೂರವಾಗಿರುವುದು ನೋವಿನ ಸಂಗತಿ. ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ” ಎಂದು ಶಿವಕುಮಾರ್ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.