ತುಮಕೂರು; ಮಾಜಿ ಶಾಸಕ ಆರ್ ನಾರಾಯಣ್(80) ನಿಧನರಾಗಿದ್ದಾರೆ. ತುಮಕೂರು ಜಿಲ್ಲೆಯ ಹಿರಿಯ ರಾಜಕೀಯ ಮುತ್ಸದ್ದಿಯಾಗಿದ್ದ ಆರ್. ನಾರಾಯಣ್ ಅವರು ಕಾಂಗ್ರೆಸ್ ಪಕ್ಷದ ವತಿಯಿಂದ ತುಮಕೂರು ಜಿಲ್ಲೆಯ ಅಂದಿನ ಬೆಳ್ಳಾವಿ ಕ್ಷೇತ್ರದಿಂದ ಕೆಲವು ಬಾರಿ ಶಾಸಕರಾಗಿದ್ದರು.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನೇತೃತ್ವದ ಸರ್ಕಾರ ಅವಧಿಯಲ್ಲಿ ಮೃತ ನಾರಾಯಣ್ ಅವರು ಗೃಹಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಮೃತರ ನಿಧನಕ್ಕೆ ತುಮಕೂರುಜಿಲ್ಲಾ ಕಾಂಗ್ರೆಸ್ ಸಮಿತಿ ಸೇರಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಡಾ.ಜಿ ಪರಮೇಶ್ವರ್, ಕೆ.ಎನ್.ರಾಜಣ್ಣ ಮತ್ತಿತರ ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಡಿಸಿಎಂ ಡಿ.ಕೆ. ಶಿವಕುಮಾರ್ ಸಂತಾಪ
ಕಾಂಗ್ರೆಸ್ ಮಾಜಿ ಶಾಸಕರಾದ ಆರ್.ನಾರಾಯಣ ಅವರ ನಿಧನಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ.
“ಆರ್.ನಾರಾಯಣ ಅವರ ನಿಧನದ ಸುದ್ದಿ ಕೇಳಿ ತೀವ್ರ ಬೇಸರವಾಗಿದೆ. ನಾರಾಯಣ ಅವರು ಸತತವಾಗಿ ಮೂರು ಬಾರಿ ಶಾಸಕರಾಗಿದ್ದರು. ಎಸ್.ಎಂ ಕೃಷ್ಣ ಅವರ ಸರ್ಕಾರದಲ್ಲಿ ಹೌಸಿಂಗ್ ಬೋರ್ಡ್ ಅಧ್ಯಕ್ಷರೂ ಆಗಿದ್ದರು.
ಕೆಂಗಲ್ ಹನುಮಂತಯ್ಯ ಅವರ ಅನುಯಾಯಿಯಾಗಿ ಕಾಂಗ್ರೆಸ್ ಪಕ್ಷದ ಭದ್ರ ಬುನಾದಿಗೆ ಶ್ರಮಿಸಿದವರು. ತಮ್ಮ ಅಚ್ಚುಕಟ್ಟುತನದಿಂದ ಕೂಡಿದ ಕೆಲಸಕ್ಕೆ ಹೆಸರಾಗಿದ್ದವರು.ತುಮಕೂರು ಜಿಲ್ಲೆಯಲ್ಲಿ ಪಕ್ಷದ ಪ್ರಮುಖ ನಾಯಕರಾಗಿದ್ದರು. ಕಾಂಗ್ರೆಸ್ ಪಕ್ಷದ ಏಳಿಗೆಗೆ ಇವರ ಕೊಡುಗೆ ಅಪಾರ. ಸರಳ, ಸಜ್ಜನಿಕೆಯ ವ್ಯಕ್ತಿತ್ವ ದೂರವಾಗಿರುವುದು ನೋವಿನ ಸಂಗತಿ. ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ” ಎಂದು ಶಿವಕುಮಾರ್ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.