ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿನ ಬಹುಕೋಟಿ ರೂಪಾಯಿ ಅಕ್ರಮದಲ್ಲಿ ಇಡಿ ಅಧಿಕಾರಿಗಳು ಪರಿಶಿಷ್ಟ ಪಂಗಡ ಇಲಾಖೆ ಮಾಜಿ ಸಚಿವರಾಗಿದ್ದ ಬಿ.ನಾಗೇಂದ್ರರನ್ನು ಅರೆಸ್ಟ್ ಮಾಡಿದ್ದಾರೆ. ಸದ್ಯ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ನಾಗೇಂದ್ರ ಅವರನ್ನು ಜಡ್ಜ್ ಎದುರು ಹಾಜರುಪಡಿಸಲಾಗಿದ್ದು ಜುಲೈ 18ರವರೆಗೆ ಇಡಿ ಕಸ್ಟಡಿಗೆ ನೀಡಿ ನ್ಯಾ.ಸಂತೋಷ್ ಗಜಾನನ ಭಟ್ ಆದೇಶ ಹೊರಡಿಸಿದ್ದಾರೆ.
ಇಂದು ಬೆಳಗ್ಗೆ ನಾಗೇಂದ್ರ ಅವರನ್ನು ಯಲಹಂಕದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಜು.18 ರ ವರೆಗೆ ಇ.ಡಿ ಕಸ್ಟಡಿಗೆ ನೀಡಿ ನ್ಯಾಯಾದೀಶರು ಆದೇಶಿಸಿದ್ದಾರೆ.ಬಳಿಕ ನ್ಯಾಯಾಧೀಶರ ಮನೆಯಿಂದ ಶಾಂತಿನಗರದಿಂದ ಇ.ಡಿ ಕಚೇರಿಗೆ ಆರೋಪಿಯನ್ನು ಇ.ಡಿ ಅಧಿಕಾರಿಗಳು ಕರೆದೊಯ್ದಿದ್ದಾರೆ.
ಬುಧವಾರ ಬೆಳಗ್ಗೆಯೇ ನಾಗೇಂದ್ರ, ಬಸನಗೌಡ ದದ್ದಲ್ ಸೇರಿ ಹಲವರ ನಿವಾಸಗಳು ಮತ್ತು ಕಚೇರಿಗಳ ಮೇಲೆ ಏಕಕಾಲಕ್ಕೆ ಇಡಿ ಟೀಂ ರೇಡ್ ಮಾಡಿತ್ತು.
ಬುಧುವಾರ ಬೆಳಗ್ಗೆಯಿಂದ ಗುರುವಾರ ರಾತ್ರಿವರೆಗೂ ನಿರಂತರ 48 ಗಂಟೆಗಳ ಕಾಲ ನಾಗೇಂದ್ರರ ಡಾಲರ್ಸ್ ಕಾಲೋನಿಯಲ್ಲಿರುವ ಮನೆಯಲ್ಲಿ ದಾಖಲೆಗಳ ತಲಾಶ್ ನಡೆಸಿತ್ತು. ಮೊನ್ನೆ ಗುರುವಾರ ರಾತ್ರಿ ದಾಳಿ ಮುಗಿಸಿ ತೆರಳಿದ್ದ ಇಡಿ ಟೀ ಮತ್ತೆ ನಿನ್ನೆ ಬೆಳಗ್ಗೆ ನಾಗೇಂದ್ರ ನಿವಾಸಕ್ಕೆ ಎಂಟ್ರಿ ಕೊಟ್ಟು ನಾಗೇಂದ್ರ ಅವರನ್ನು ವಶಕ್ಕೆ ಪಡೆದು ಬಳಿಕ ಬಂಧಿಸಿತ್ತು. ಬಳಿಕ ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಿಸಲಾಯಿತು.
ಜಾರಿ ನಿರ್ದೇಶನಾಲಯ ಕಸ್ಟಡಿಗೆ ಕೊಟ್ಟ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿರುವ ನಾಗೇಂದ್ರ ಅವರು, ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲವೇ ಇಲ್ಲ, ನನ್ನ ಬಂಧನ ಏಕೆ ಆಗಿದೆ ಎಂದು ಗೊತ್ತಿಲ್ಲ ಎಂದರು. ನಿಮ್ಮ ಅಧಿಕಾರಿಗಳು ನಿಮಗೆ ಅರಿವಿಲ್ಲದೇ ಏನಾದ್ರು ಮಾಡಿದ್ರಾ ಎಂಬ ಪ್ರಶ್ನೆಗೆ ಯಾವುದೇ ಉತ್ತರ ನೀಡದೇ ತೆರಳಿದರು.