ಮೈಸೂರು: ರೇವಣ್ಣ ಅವರೇ ನನ್ನ ಕುಟುಂಬವೇ ಬೇರೆ ನಿಮ್ಮದೇ ಬೇರೆ. ನಾನು ಬೆಳೆದಿರುವ ಪರಿಸರವೇ ಬೇರೆ. ನಾನು ನನ್ನ ಮಗ ಯಾವತ್ತೂ ಆ ರೀತಿಯ ತಪ್ಪು ಮಾಡಿಲ್ಲ. ನಾನು ನನ್ನ ಮಗ ಯಾವ ಅಪರಾಧವೂ ಮಾಡಿಲ್ಲ. ಬಂಧಿಸುವಂತಹ ಪ್ರಶ್ನೆಯೆ ಬಂದಿಲ್ಲ ಎಂದು ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ನಾನು ಮತ್ತು ನನ್ನ ಮಗ ಜೈಲಿಗೆ ಹೋಗುವಂತಹ ಯಾವ ತಪ್ಪು ಮಾಡಿಲ್ಲ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ತಿರುಗೇಟು ನೀಡಿದರು. ಜಿ.ಟಿ.ದೇವೇಗೌಡ ಮತ್ತು ಅವರ ಮಗನನ್ನು ಕಾಂಗ್ರೆಸ್ ಸರ್ಕಾರ ಜೈಲಿಗೆ ಕಳುಹಿಸಲು ಮುಂದಾಗಿತ್ತು. ಕುಮಾರಸ್ವಾಮಿ ಅವರನ್ನು ರಕ್ಷಿಸಿದ್ದರು ಎಂದು ಎಚ್.ಡಿ ರೇವಣ್ಣ ಹೇಳಿದ್ದರು. ನನ್ನ ತಂದೆ ಪಟೇಲರು. ಅವರ ಮೇಲೆ ಒಂದೇ ಒಂದು ಪೊಲೀಸ್ ಕೇಸ್ ಇರಲಿಲ್ಲ. ನಾನು ಸಾರ್ವಜನಿಕ ಜೀವನಕ್ಕೆ ಬಂದು 54 ವರ್ಷವಾಗಿದೆ. ನನ್ನ ಮೇಲೆ ಇದುವರೆಗೆ ಒಂದೇ ಒಂದು ಕೇಸ್ ಕೂಡ ಪೊಲೀಸ್ ಠಾಣೆಯಲ್ಲಿ ಇಲ್ಲ. ನನ್ನ ಮಗನ ಮೇಲೂ ಇಲ್ಲ ಎಂದು ಸ್ಪಷ್ಟಪಡಿಸಿದರು. ಕ್ಷೇತ್ರದ ಜನರ ಸೇವೆ ಮಾಡುವುದು ಮಾತ್ರ ನನ್ನ ತಲೆಯಲ್ಲಿ ಇರುವುದು. ಅದು ಬಿಟ್ಟರೆ ನನ್ನ ತಲೆಯಲ್ಲಿ ಬೇರೆ ಯೋಚನೆ ಇಲ್ಲ ಎಂದಿದ್ದಾರೆ.
ರಾಜ್ಯ ಗೃಹ ಮಂಡಳಿ ಅಧ್ಯಕ್ಷನಾಗಿದ್ದಾಗ ಜೆಡಿಎಸ್ – ಕಾಂಗ್ರೆಸ್ ಇಬ್ಬರು ಸೇರಿ ಅದರಲ್ಲಿ ಅವ್ಯವಹಾರ ಆಗಿದೆ ಎಂದು ತನಿಖೆ ಮಾಡಿಸಿದ್ದರು ಅಷ್ಟೆ. ನಾನು ಇದುವರೆಗೆ ಯಾರಿಂದಲೂ ನನ್ನ ರಕ್ಷಣೆ ಮಾಡಿ ಎಂದು ದೂರವಾಣಿ ಕರೆ ಮಾಡಿಸಿಲ್ಲ. ಕುಮಾರಸ್ವಾಮಿಯಿಂದ ನಾನು ಯಾವುದೇ ಕರೆ ಮಾಡಿಸಿ ನನ್ನ ರಕ್ಷಣೆ ಮಾಡಿಸಿಕೊಂಡಿಲ್ಲ. ನಾನು ನನ್ನ ಮಗ ಬಂಧನವಾಗುವಂತಹ ಯಾವ ಅಪರಾಧವೂ ಮಾಡಿಲ್ಲ ಟಾಂಗ್ ಕೊಟ್ಟರು. ಸಿದ್ದರಾಮಯ್ಯ ಸೇರಿದಂತೆ ಯಾವ ಸಿಎಂ ಕೂಡ ನನ್ನ ಬಂಧಿಸುವಂತೆ ಹೇಳಿಲ್ಲ. ಸಿದ್ದರಾಮಯ್ಯ ಸೇಡು ತೀರಿಸಿಕೊಳ್ಳಲು ರಾಜಕೀಯ ಮಾಡಿದ್ದಾರೆ. ಆದರೆ ಬಂಧಿಸುವಂತಹ ರೀತಿ ವರ್ತಿಸಿಲ್ಲ. ರೇವಣ್ಣ ಯಾಕೆ ಈ ರೀತಿ ಹೇಳಿದ್ರು ಗೊತ್ತಿಲ್ಲ. ವಿಧಾನಸಭೆ ಅಧಿವೇಶನದಲ್ಲಿ ಅವರು ಸಿಗುತ್ತಾರೆ. ಅವತ್ತೇ ಅವರ ಬಳಿ ಕೇಳಿ ಹೇಳುತ್ತೇನೆ. ನನ್ನ ವಿರುದ್ಧ ಯಾರೂ ಬಂಧಿಸುವಂತಹ ಸೇಡಿನ ರಾಜಕಾರಣ ಮಾಡಿಲ್ಲ. ನಾನು ಕೂಡ ಆ ರೀತಿ ನಡೆದುಕೊಂಡಿಲ್ಲ ಎಂದು ತಿಳಿಸಿದರು. ಅಂತಾ ಸ್ಥಿತಿ ಬರುವುದು ಬೇಡ ಅಂತಾ ಪ್ರಾರ್ಥಿಸುತ್ತೇನೆ. ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗುವುದನ್ನು ತಪ್ಪಿಸಿದ್ದು ಹೆಚ್.ಡಿ.ರೇವಣ್ಣ. 20 ರಲ್ಲಿ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಬೇಕಿತ್ತು. ಈ ಬಗ್ಗೆ ರೇವಣ್ಣ ಒಪ್ಪಿಕೊಂಡು ಕ್ಷಮೆ ಕೂಡ ಯಾಚಿಸಿದ್ದಾರೆ. ಅವರು ಡಿಸಿಎಂ ಆಗಬೇಕಿತ್ತು. ಅದು ಆಗುವುದಿಲ್ಲ ಅನ್ನೋ ಕಾರಣಕ್ಕೆ ತಪ್ಪಿಸಿದರು. ದೊಡ್ಡ ಗೌಡರ ಜೊತೆ ಮಾತನಾಡಿ ಯಡಿಯೂರಪ್ಪ ಅವರಿಗೆ ಸಿಎಂ ಸ್ಥಾನ ತಪ್ಪಿಸಿದರು ಎಂದರು.