ಬೆಂಗಳೂರು: ಬಿಎನ್ಎಂ ತಾಂತ್ರಿಕ ಸಂಸ್ಥೆ ಮತ್ತು ಹೆರಿಟೇಜ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ‘ಸೃಷ್ಟಿ ಸಂಭ್ರಮ- 2024 ಮಾತೃಭೂಮಿ ಹಬ್ಬ’ ಹಾಗೂ ಪ್ರಕೃತಿ ಮಿತ್ರ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಬಿಎನ್ಎಂಐಟಿ ಆವರಣದಲ್ಲಿ ಆಯೋಜಿಸಲಾಗಿತ್ತು. ಬಿಎನ್ಎಂ ತಾಂತ್ರಿಕ ಸಂಸ್ಥೆಯ ಅಧ್ಯಕ್ಷರಾದ ನಾರಾಯಣರಾವ್ ಆರ್ ಮಾನೆ ಹಾಗೂ ಐಎಫ್ಎಸ್ ಅಧಿಕಾರಿ ಸ್ವಾತಿ ಮಿಶ್ರಾ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಐಎಫ್ಎಸ್ ಅಧಿಕಾರಿಸ್ವಾತಿ ಮಿಶ್ರಾ ರವರು ಮಾತನಾಡಿ ತಾಪಮಾನ, ಹವಾಮಾನ ವೈಪರೀತ್ಯದಂತಹ ಜಾಗತಿಕ ಸಮಸ್ಯೆಗಳನ್ನು ಎದುರಿಸಲು ಮುಂದಿನ ಪೀಳಿಗೆ ಸಜ್ಜಾಗಬೇಕಿದೆ. ಹಾಗಾಗಿ ಪ್ರತಿಯೊಬ್ಬರೂ ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಜವಾಬ್ದಾರಿ ತೋರಬೇಕಿದೆ ಎಂದರು. ನಾರಾಯಣರಾವ್ ಆರ್ ಮಾನೆಮಾತನಾಡಿ ಪರಿಸರ ಹಾಗೂ ವನ್ಯಜೀವಿಗಳು, ಪಕ್ಷಿಗಳ ಬಗ್ಗೆ ಬಹುತೇಕರಿಗೆ ಮಾಹಿತಿ ಇಲ್ಲದ್ದರಿಂದ ರಕ್ಷಣೆ ದೊರೆಯುತ್ತಿಲ್ಲ. ಈ ಬಗ್ಗೆ ಎಲ್ಲರಿಗೂ ಮಾಹಿತಿತಿಳಿಸುವ ಮೂಲಕ ಅಳಿವಿನಂಚಿನಲ್ಲಿರುವ ವನ್ಯ ಜೀವಿ, ಸಂಪತ್ತು ಉಳಿಸಿಕೊಳ್ಳಬೇಕಿದೆ ಆದ್ದರಿಂದ ನಮ್ಮ ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆಯ ಕುರಿತು ಪ್ರತಿಯೊಬ್ಬರಲ್ಲೂ ಪ್ರಜ್ಞೆ ಇರಬೇಕು ಎಂದು ತಿಳಿಸಿದರು.
2013 ರಲ್ಲಿ ಪ್ರಾರಂಭವಾದ ಈ ಸೃಷ್ಟಿಸಂಭ್ರಮ ಕಾರ್ಯಕ್ರಮವು ಪ್ರತಿ ವರ್ಷವೂಬಿಎನ್ಎಂಐಟಿ ವತಿಯಿಂದ ಆಯೋಜಿಸಲಾಗುತ್ತಿದೆ ಪ್ರಕೃತಿಯ ಉಳಿವಿಗಾಗಿ ಯುವ ಪೀಳಿಗೆಗಳಲ್ಲಿ ಜಾಗೃತಿ ಮೂಡಿಸಿ ಸಂರಕ್ಷಿಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಎಂದು ಬಿಎನ್ಎಂಐಟಿ ಉಪನಿರ್ದೇಶಕರಾದ ಡಾ. ಕೃಷ್ಣಮೂರ್ತಿ ಜಿ ಎನ್ ತಿಳಿಸಿದರು.
ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ ಮತ್ತು ವನ್ಯಜೀವಿ ಸಂರಕ್ಷಣೆಗೆ ಕೊಡುಗೆ ನೀಡಿದ ವಲಯ ಅರಣ್ಯಾಧಿಕಾರಿಗಳಾದ ವಿವೇಕ್ ಎಸ್, ರೇವಣಸಿದ್ದಯ್ಯ ಬಿ ಹಿರೇಮಠ, ಉಪ ವಲಯ ಅರಣ್ಯಾಧಿಕಾರಿಗಳಾದ ಸಿ ಪ್ರಭುಸ್ವಾಮಿ, ಸಂಪತ್ ಆರ್, ಅರಣ್ಯ ಗಸ್ತು ವಾರ್ಡನ್ ದಿಲೀಪ್ ಕುಮಾರ್ ಎಸ್, ಶಂಕರ್ ರಾವ್, ಸುನಿಲ್ ದುಗಾರ್ ರವರಿಗೆ ಪ್ರಕೃತಿ ಮಿತ್ರ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು.
ಈ ವೇಳೆ ಬಿಎನ್ಎಂಐಟಿ ಅಧ್ಯಕ್ಷ ನಾರಾಯಣರಾವ್ ಆರ್ ಮಾನೆ,ಡೀನ್ ಪ್ರೊ . ಈಶ್ವರ್ ಎನ್ ಮಾನೆ, ಹೆಚ್ಚುವರಿನಿರ್ದೇಶಕರು ಮತ್ತು ಪ್ರಾಂಶುಪಾಲಡಾ. ಎಸ್ ವೈ ಕುಲಕರ್ಣಿ, ಉಪನಿರ್ದೇಶಕರಾದ ಡಾ. ಕೃಷ್ಣಮೂರ್ತಿ ಜಿ ಎನ್, ಡಿಟಿಇ ಮತ್ತು ವನ್ಯಜೀವಿ ಛಾಯಾಗ್ರಾಹಕ ಎಸ್ ಪಿ ನಾಗೇಂದ್ರ, ವಿಜಯಲಕ್ಷ್ಮಿ ವಿಜಯ್ ಕುಮಾರ್, ಶರತ್ ಬಾಬು ಉಪಸ್ಥಿತರಿದ್ದರು.