ದೇವನಹಳ್ಳಿ: ಪಟ್ಟಣದ ಡಾ||ಬಿ.ಆರ್. ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತ ಹಾಗೂ ಭಾರತ ಸೇವಾದಳ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ ಜಯಂತಿಯ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಆಹಾರ ಮತ್ತು ನಾಗರೀಗ ಸರಬರಾಜು, ಗ್ರಾಹಕ ವ್ಯವಹಾರಗಳ ಸಚಿವ ಕೆಎಚ್. ಮುನಿಯಪ್ಪ ಗೌರವ ಸಲ್ಲಿಸಿದರು.
ನಂತರ ಅವರು ಮಾತನಾಡಿ ಮಹಾತ್ಮ ಗಾಂಧೀಜಿಯವರ 155 ನೇ ಜಯಂತಿಯ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ರವರ ಜನ್ಮದಿನದ ದಿನವಾದ ಇಂದು ಮಹಾತ್ಮರನ್ನು ನೆನೆಯಲೇಬೇಕು ಭಾರತವನ್ನು ಬ್ರಿಟಿಷರ ಕಪಿಮುಷ್ಠಿಯಿಂದ ಶಾಂತಿ ಹೋರಾಟದ ಮುಖಾಂತರ ಮುಕ್ತಗೊಳಿಸಿದವರು, ಗಾಂಧೀಜಿಯವರು ರಾಷ್ಟ್ರಪಿತರೆಂದೇ ಪ್ರಸಿದ್ಧರಾಗಿದ್ದು ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಅಹಿಂಸಾ ನೀತಿಯನ್ನು ಪ್ರತಿಪಾದಿಸುವ ಮೂಲಕ ಸ್ವಾತಂತ್ರ್ಯ ಸಂಗ್ರಾಮ ರೂವಾರಿಯಾಗಿ ಸ್ವಾತಂತ್ರ್ಯ ತಂದುಕೊಟ್ಟರು, ನಾನು ಕೂಡ ಅವರ ತತ್ವ ಸಿದ್ದಾಂತಕ್ಕೆ ಬೆಲೆ ನೀಡಿ ಮಾಂಸ ಮತ್ತು ಮದ್ಯವನ್ನು ತ್ಯಜಿಸಿ ಬರಿ ತರಕಾರಿಗಳನ್ನು ಉಪಯೋಗಿಸುತ್ತಿದ್ದೇನೆ ಎಂದರು.
ಹಲವಾರು ರಾಷ್ಟ್ರೀಯ ನಾಯಕರೊಂದಿಗೆ, ಮಹಾತ್ಮ ಗಾಂಧಿಯವರು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಭಾರತದ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿದರು. ಪ್ರಪಂಚದಾದ್ಯಂತ, ವಿವಿಧ ನಾಗರಿಕ ಹಕ್ಕುಗಳ ಗುಂಪುಗಳು ಅವರ ಅಹಿಂಸಾತ್ಮಕ ವಿಧಾನದಿಂದ ಸ್ಫೂರ್ತಿ ಪಡೆದರು. ಗಾಂಧೀಜಿ ತನ್ನ ಸತ್ಯ, ಅಹಿಂಸೆಯ ಸಿದ್ಧಾಂತದಿಂದಲೇ ಜಗವನ್ನು ಗೆದ್ದ ಚೇತನ. ಹೀಗಾಗಿ ವಿಶ್ವದಾದ್ಯಂತ ಗಾಂಧಿ ಜಯಂತಿ ದಿನವನ್ನು ಆಚರಿಸಲಾಗುತ್ತದೆ. ಗಾಂಧೀಜಿ ಅವರ ಶಾಂತಿ ಮತ್ತು ಅಹಿಂಸಾ ತತ್ವವನ್ನು ಗೌರವಿಸುವ ಸಲುವಾಗಿ ಈ ದಿನವನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನಾಗಿಯೂ ಆಚರಣೆ ಮಾಡಲಾಗುತ್ತದೆ ಎಂದರು.
ಗಾಂಧೀಜಿ ಸತ್ಯ, ಅಹಿಂಸೆ, ಸತ್ಯಾಗ್ರಹ ಮತ್ತು ಅಸಹಕಾರ ಚಳುವಳಿಗಳ ಮೂಲಕ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು. ಅವರ ಜೀವನ ಸರಳತೆಯ ದಾರಿದೀಪವಾಗಿದ್ದು, ಶಾಂತಿಯುತ ಮಾರ್ಗಗಳ ಮೂಲಕ ಮಹತ್ತರವಾದ ಬದಲಾವಣೆಯನ್ನು ಸಾಧಿಸಬಹುದು ಎಂದು ಸಾಬೀತು ಮಾಡಿದರು.
ಗಾಂಧೀಜಿ ಅಹಿಂಸೆಯ ದೃಢವಾದ ಪ್ರತಿಪಾದಕರಾಗಿದ್ದರು, ಇದು ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಗೆ ಅತ್ಯಂತ ಪ್ರಬಲವಾದ ಅಸ್ತ್ರ ಎಂದು ಅವರು ನಂಬಿದ್ದರು. ಉಪ್ಪಿನ ಸತ್ಯಾಗ್ರಹ ಮತ್ತು ಭಾರತ ಬಿಟ್ಟು ತೊಲಗಿ ಮುಂತಾದ ಚಳುವಳಿಗಳ ಮೂಲಕ ಅಹಿಂಸೆಯ ಶಕ್ತಿಯನ್ನು ಪ್ರದರ್ಶಿಸಿ ಅವರ ತತ್ವಾದರ್ಶಗಳ ಮೂಲಕ ನಮಗೆಲ್ಲಾ ಇಂದಿಗೂ ಸ್ಪೂರ್ತಿಯ ಚುಲುಮೆಯಾಗಿದ್ದಾರೆ ಎಂದರು.
ಜಾತ್ಯಾತೀತತೆ ಗಾಂಧಿಯವರ ಮತ್ತೊಂದು ಕೊಡುಗೆಯಾಗಿದೆ. ಯಾವುದೇ ಧರ್ಮವು ಸತ್ಯದ ಮೇಲೆ ಏಕಸ್ವಾಮ್ಯವನ್ನು ಹೊಂದಿರಬಾರದು ಎಂಬುದು ಅವರ ನಂಬಿಕೆಯಾಗಿತ್ತು. ಮಹಾತ್ಮ ಗಾಂಧಿಯವರು ನಿಸ್ಸಂಶಯವಾಗಿ ವಿವಿಧ ಧರ್ಮಗಳ ನಡುವೆ ಸೌಹಾರ್ದವನ್ನು ಪ್ರೋತ್ಸಾಹಿಸಿದರು ನಾನು ಆಹಾರ ಮಂತ್ರಿಯಾಗಿ ಅನ್ನಭಾಗ್ಯ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ಹಸಿವುಮುಕ್ತ ಕರ್ನಾಟಕ ಮಾಡಲು ಪಣತೊಟ್ಟು ಕೆಲಸ ಮಾಡುತ್ತಿದ್ದೇವೆ. 1.28 ಕೋಟಿ ಕಾರ್ಡ್ದಾರರು 4.37 ಕೋಟಿ ಫಲಾನುಭವಿಗಳಿಗೆ 5 ಕೆ.ಜಿ. ಅಕ್ಕಿ ಹಾಗೂ 5 ಕೆ.ಜಿ. ಮೊತ್ತ ಆಃಖಿ ನಗದು ವರ್ಗಾವಣೆಯನ್ನು ಮಾಡಲಾಗುತ್ತಿದೆ.
ಜುಲೈ-2023 ರಿಂದ ಜುಲೈ-2024 ರವರೆಗೆ ರೂ. 8,437.66 ಕೋಟಿ ನಗದು ವರ್ಗಾವಣೆ ಮಾಡಲಾಗಿದೆ ಎಂದರು.ರಾಷ್ಟ್ರದಲ್ಲಿ ನುಡಿದಂತೆ ನಡೆದ ಸರ್ಕಾರದ ಯಾವುದಾದರು ಇದ್ದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ ಎಂದರು.ಈ ಸಂದರ್ಭದಲ್ಲಿ ಬಯಪ ಅಧ್ಯಕ್ಷ ವಿ. ಶಾಂತಕುಮಾರ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷರಾದ ರಾಜಣ್ಣ, ತಾಲ್ಲೂಕಿನ ಗ್ಯಾರಂಟಿ ಅಧ್ಯಕ್ಷರಾದ ಜಗನ್ನಾಥ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಆರ್ ರವಿಕುಮಾರ್, ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರಪ್ಪ, ಎಸ್ಸಿ ವಿಭಾಗದ ಜಿಲ್ಲಾ ಅಧ್ಯಕ್ಷ ಲೋಕೇಶ್, ಜಿ.ಪಂ. ಮಾಜಿ ಸದಸ್ಯ ಕೆ.ಸಿ.ಮಂಜುನಾಥ್, ಮಹಿಳಾ ಮುಖಂಡರು, ಸೇವಾದಳದ ಪ್ರತಿನಿಧಿಗಳು ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.