ದೇವನಹಳ್ಳಿ: ಒಳ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಯಥಾವತ್ತಾಗಿ ರಾಜ್ಯದಲ್ಲಿ ಅನುಷ್ಠಾನ ಮಾಡುವಂತೆ ಒತ್ತಾಯಿಸಿ ಬೆಂ.ಗ್ರಾ ಜಿಲ್ಲಾ ಆಡಳಿತ ಭವನದ ಮುಂದೆ ಅ.16 ರಂದು ಬೃಹತ್ ಪ್ರತಿಬಟನೆ ಹಮ್ಮಿಕೊಂಡಿದ್ದೇವೆ ಎಂದು ಕರ್ನಾಟಕ ಮಾದಿಗ ದಂಡೋರದ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ ತಿಳಿಸಿದರು.
ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ಕರ್ನಾಟಕ ಮಾದಿಗ ಸಂಘಟನೆಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ “ಒಳ ಮೀಸಲಾತಿ ಜಾರಿ”ಗಾಗಿ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಹಮ್ಮಿಕೊಂಡಿರುವುದರಿಂದ ಎಲ್ಲಾ ಮಾದಿಗ ಬಂಧುಗಳು ಆಗಮಿಸಿ ಪಾಲ್ಗೊಳ್ಳಿ ಎಂದು ತಿಳಿಸಿ ಮಾತನಾಡಿ, ಮೀಸಲಾತಿಯ ಅನುಷ್ಠಾನಕ್ಕಾಗಿ ಕಳೆದ 30 ವರ್ಷಗಳಿಂದ ನಿರಂತರ ಹೋರಾಟಗಳು ನಡೆಯುತ್ತಿದೆ,
ಅ.16ರಂದು ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟಿಸಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಮನವಿ ಪತ್ರ ನೀಡಲಿದ್ದೇವೆ, ಒಂದೊಮ್ಮೆ ಒಳ ಮೀಸಲಾತಿ ಜಾರಿಯಾಗದೆ ಇದ್ದರೇ, ಸುಪ್ರೀಂ ಕೋರ್ಟ್ನ ಆದೇಶ ನಿಂದನೆಗೆ ಗುರಿಯಾಗಲಿದ್ದೀರಿ, ನಾವು ಉಗ್ರ ಹೋರಾಟ ನಡೆಸಲಿದ್ದು, ಹಿಂಸಾತ್ಮಕ ರೂಪ ತಾಳಲಿದೆ ಅದಕ್ಕೆ ಸರ್ಕಾರವೇ ನೇರ ಹೊಣೆ’ ಎಂದರು.
ಹಿಂದೆ ನಡೆದ ಎಲ್ಲಾ ಚುನಾವಣೆಯಲ್ಲಿ ಕಾಂಗ್ರೆಸ್ ಮಾದಿಗ ಸಮುದಾಯದ ಮತಗಳನ್ನು ಪಡೆದು ಒಳ ಮೀಸಲಾತಿ ಜಾರಿ ಮಾಡುವ ಬಗ್ಗೆ ಮೀನಾಮೇಷ ಎಣಿಸುತ್ತಿದ್ದಾರೆ, ಈ ಅಂಶವನ್ನು ತಮ್ಮ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಘೋಷಣೆ ಮಾಡಿದ್ದರು, ಸುಪ್ರೀ ಕೋರ್ಟ್ ಆದೇಶದಂತೆ ಅದನ್ನು ಅನುಷ್ಠಾನ ಮಾಡಲಿ’ ಎಂದು ಒತ್ತಾಯಿಸಿದರು.
ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಜಿ.ಮಾರಪ್ಪ ಮಾತನಾಡಿ ಜನಸಂಖ್ಯೆಯ ಆಧಾರದಲ್ಲಿ ಮೀಸಲಾತಿ ವರ್ಗೀಕರಣ ಮಾಡಬೇಕಿದೆ, ಒಳ ಮೀಸಲಾತಿಗಾಗಿ ರಾಜ್ಯದ ಎಲ್ಲ ಜಿಲ್ಲಾಡಳಿತ ಭವನದ ಮುಂದೆ ಹೊಸಕೋಟೆ, ದೇವನಹಳ್ಳಿ, ನೆಲಮಂಗಲ, ದೊಡ್ಡಬಳ್ಳಾಪುರ ತಾಲೂಕಿನಿಂದ ಸುಮಾರು 3000ಕ್ಕೂ ಅಧಿಕ ಜನರು ಆಗಮಿಸಲಿದ್ದಾರೆ, ಒಳ ಮೀಸಲಾತಿ ಜಾರಿ ಮಾಡದಿದ್ದರೆ ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವರ ಮನೆಯ ಮುಂದೆ ಧರಣಿ ನಡೆಸಿ ಮುತ್ತಿಗೆ ಹಾಕುತ್ತೇವೆ, ಹೋರಾಟ ಉಗ್ರವಾಗುವ ಮುನ್ನವೇ ಎಚ್ಚೆತ್ತು ರಾಜ್ಯ ಸರ್ಕಾರ ಒಳ ಮೀಸಲಾತಿ ಅನುಷ್ಠಾನಕ್ಕೆ ಮುಂದಾಗಲಿ ಎಂದರು.
ಇದೇ ವೇಳೆ ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಜಿ.ಮಾರಪ್ಪ, ಮಾದಿಗ ದಂಡೋರ ತಾಲೂಕು ಅಧ್ಯಕ್ಷ ಎಂ.ವೆಂಕಟೇಶ್, ತಾಲ್ಲೂಕು ಉಪಾಧ್ಯಕ್ಷ ಮುನಿರಾಜು, ಪ್ರಧಾನ ಕಾರ್ಯದರ್ಶಿ ಬುಳ್ಳಹಳ್ಳಿ ಮುನಿರಾಜು, ಪ್ರಚಾರ ಸಮಿತಿ ಅಧ್ಯಕ್ಷ ಕೆ.ಎಂ.ದೇವರಾಜ್, ಖಜಾಂಜಿ ಸಾವಕನಹಳ್ಳಿ ಶ್ರೀನಿವಾಸ್, ಹ್ಯಾಡಾಳ ದೇವರಾಜು, ನಾರಾಯಣಸ್ವಾಮಿ ಸೇರಿದಂತೆ ಇತರರು ಇದ್ದರು.