ಬೆಂಗಳೂರು: ಯೋಗೇಶ್ವರ್ ಸಾಕಷ್ಟು ಚುನಾವಣೆ ಮಾಡಿದ್ದಾರೆ, ಚುನಾವಣೆಯಲ್ಲಿ ತಂತ್ರಗಾರಿಕೆ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಚುನಾವಣೆ ಮಾಡಿರುವ ನಮ್ಮೆಲ್ಲ ಕಾರ್ಯಕರ್ತರ ಮುಖಂಡರು ಬಹಳ ಆತ್ಮವಿಶ್ವಾಸದಿಂದ ಇದ್ದಾರೆ. ಯೋಗೇಶ್ವರ್ ಯಾವ ಆಯಾಮ ಇಟ್ಟುಕೊಂಡು ಹೇಳಿದ್ದಾರೆ ಗೊತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ಡಿ.ಕೆ ಸುರೇಶ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಹೆಚ್ಡಿ ಕುಮಾರಸ್ವಾಮಿ ಕುರಿತು ಜಮೀರ್ ಹೇಳಿಕೆಯಿಂದ ಆಘಾತವಾಗಿದೆ ಎಂಬ ಸಿಪಿ ಯೋಗೇಶ್ವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯೋಗೇಶ್ವರ ಯಾವ ಆಯಾಮದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಆದರೆ ಫಲಿತಾಂಶ ನಮ್ಮ ಪರವಾಗಿ ಬರಲಿದೆ. ನಮ್ಮ ಕಾರ್ಯಕರ್ತರು ಬಹಳ ವಿಶ್ವಾಸದಲ್ಲಿದ್ದಾರೆ ಎಂದರು. ಜಮೀರ್ ಹೊಸದಾಗಿ ಹೇಳಿಕೆ ನೀಡಿದ್ದರೆ ಒಪ್ಪಬಹುದಿತ್ತು ಆದರೆ ಅವರು ಆಡಿದ ಮಾತು ಹೊಸದೇನಿಲ್ಲ ಸಾಕಷ್ಟು ಬಾರಿ ಮಾತನಾಡಿದ್ದಾರೆ. ಆದರೆ ಮಾಧ್ಯಮಗಳಲ್ಲಿ ತಿರುಚಲಾಗಿದೆ. ಮಾಧ್ಯಮಗಳು ನಿಷ್ಪಕ್ಷಪಾತ ಕೆಲಸ ಮಾಡಬೇಕಿತ್ತು. ಮಾಧ್ಯಮಗಳಿಗೆ ನಮ್ಮ ಪಕ್ಷದ ಮೇಲೆ ಯಾಕೆ ಕೋಪ ಇದೆ ಅಂತ ಗೊತ್ತಿಲ್ಲ. ಪಕ್ಷದ ಸಂಬಂಧಪಟ್ಟ ಮಾತಲ್ಲ. ವೈಯುಕ್ತಿಕ ಮಾತುಗಳು ಅವು. ಚುನಾವಣಾ ದೃಷ್ಟಿಯಿಂದ ಮಾಧ್ಯಮದಲ್ಲಿ ಚರ್ಚೆ ಮಾಡಿದ್ದೀರಿ. ಇದು ನೀವು(ಮಾಧ್ಯಮಗಳು) ಮಾಡಿದ ಸೃಷ್ಟಿ ಇದು ಎಂದು ಗರಂ ಆದರು ಮುಂದುವರಿದು, ಇದೇ ಕುಮಾರಸ್ವಾಮಿ ಡಿಕೆ ಶಿವಕುಮಾರ ಅವರಿಗೆ ಕಳ್ಳ ಎಂದಿದ್ದರು. ಆದರೆ ಮಾಧ್ಯಮಗಳು ಈ ಬಗ್ಗೆ ಚರ್ಚೆ ಮಾಡಲಿಲ್ಲ ಎಂದು ಮಾಧ್ಯಮಗಳ ವಿರುದ್ಧ ಹರಿಹಾಯ್ದ ಡಿ ಕೆ ಸುರೇಶ್, ಈ ಚುನಾವಣೆಯಲ್ಲಿ ವೈಯಕ್ತಿಕ ಟೀಕೆ ಟಿಪ್ಪಣಿ ಚರ್ಚೆ ಮಾಡಲಾಯಿತೇ ಹೊರತು ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಬಗ್ಗೆ ಚರ್ಚೆಯಾಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಮೀರ್ ಅಹಮದ್ ಮಾತು ವೈಯಕ್ತಿಕ ಹೇಳಿಕೆಯಾಗಿದೆ. ಜಮೀರ್ ಹೇಳಿಕೆಯನ್ನು ಚರ್ಚೆ ಮಾಡುವ ಹಾಗೆ ಮಾಡಿದ್ದು ಮಾಧ್ಯಮದವರು ಎಂದು ಹೇಳಿದರು. ಡಿಕೆ ಶಿವಕುಮಾರ್ ರನ್ನು ಕಳ್ಳ ಅಂತ ಕುಮಾರಸ್ವಾಮಿ ಕರೆದಾಗ ಮಾಧ್ಯಮಗಳು ಇದನ್ನು ಚರ್ಚೆ ಮಾಡಲಿಲ್ಲ, ನೂರು ರೂಪಾಯಿಗೆ ಕೂಲಿಗೆ ಇದ್ದ ಎಂಬುದನ್ನು ತೋರಿಸಲಿಲ್ಲ ಮಾಧ್ಯಮಗಳು ನಿಮ್ಮ ಮೌಲ್ಯಗಳನ್ನೂ ಕೂಡ ಪ್ರಶ್ನೆ ಮಾಡಬೇಕಾದ ಸಮಯ ಬಂದಿದೆ ಎಂದು ಮಾಧ್ಯಮಗಳ ವಿರುದ್ದವೇ ಡಿಕೆ ಸುರೇಶ್ ಗರಂ ಆದರು.