ವಾಯುದೇವರ ಅವತಾರನಾದ ಹನುಮಂತನ ಕುರಿತಾದ ವ್ರತವನ್ನು ಬ್ರಹ್ಮದೇವರ ಆಜ್ಞೆಯಂತೆ ದೇವತೆಗಳು ಮಾಡಿ ಹನುಮದ್ ವ್ರತವನ್ನು ಪ್ರಖ್ಯಾತಗೊಳಿಸಿದ್ದಾರೆ. ಬಹಳಷ್ಟು ಜನರಿಗೆ ಹನುಮ ಜಯಂತಿ ಮತ್ತು ಹನುಮದ್ವ್ರತದಲ್ಲಿ ವ್ಯತ್ಯಾಸ ತಿಳಿದಿಲ್ಲ. ಎರಡು ಬಾರಿ ಹನುಮ ಜಯಂತಿ ಎಂದೇ ಕರೆಯುತ್ತಾರೆ. ಆದರೆ ಹನುಮಂತನು ಜನಿಸಿದ್ದು ಚೈತ್ರ ಶುದ್ಧ ಪೂರ್ಣಿಮೆಯಂದು ಅಂದು ಅವನ ಜಯಂತಿ ಆಚರಿಸಲಾಗುತ್ತದೆ.
ಆದರೆ ಮಾರ್ಗಶಿರ ಮಾಸದಲ್ಲಿ ಹನಮದ್ ವ್ರತ.ಹನುಮದ್ ವ್ರತವನ್ನು ಯಾಕೆ ಆಚರಿಸಬೇಕು ಹಿನ್ನೆಲೆ ಏನು ಯಾರು ಆಚಿಸಿದ್ದರು? ಹನುಮದ್ ವ್ರತದ ಕಥೆಯು ವೇದವ್ಯಾಸ ದೇವರಿಂದ ವಿರಚಿತ “ಭವಿಷ್ಯೋತ್ತರ ಪುರಾಣದಲ್ಲಿ ಉಲ್ಲೇಖಿತವಾಗಿದೆ. ಮಹಾಭಾರತದಲ್ಲಿ ಕೌರವರೊಂದಿಗೆ ಲೆತ್ತವಾಡಿ ಸೋತು ಪಾಂಡವರು ವನವಾಸ ಅನುಭವಿಸುತ್ತಿದ್ದಾಗ ಅವರಿಗೆ ಅನೇಕ ಋಷಿಮುನಿಗಳ ಸಮಾಗಮ ಆಶೀರ್ವಾದ ಅಮೃತ ಉಪದೇಶಗಳು ದೊರೆಯುತ್ತದೆ. ಇಂತಹದೇ ಒಂದು ಸಂದರ್ಭದಲ್ಲಿ ಪಾಂಡವರು ದ್ವೈತವನದಲ್ಲಿ ವಾಸವಾಗಿದ್ದಾಗ ವೇದವ್ಯಾಸ ದೇವರು ಅವರ ಬಳಿ ಬರುತ್ತಾರೆ.
ಅವರಿಗೆ ಪಾಂಡವರು ಷೋಡಶೋಪಚಾರಗಳನ್ನು ಮಾಡಿ ಸತ್ಕರಿಸಿ ಆಶೀರ್ವಾಧ ಪಡೆದಾಗ ವೇದವ್ಯಾಸರು ನಿಮಗೆ ಒಂದು ಉತ್ತಮವಾದ ವ್ರತವನ್ನು ಹೇಳುತ್ತೇನೆ ಆ ವ್ರತದ ಹೆಸರು “ಹನುಮದ್ ವ್ರತ” ಆ ವ್ರತ ಮಾಡುವುದರಿಂದ ನಿಮ್ಮ ಕಷ್ಟಗಳೆಲ್ಲಾ ಪರಿಹಾರವಾಗಿ ರಾಜ್ಯ ಪುನಃ ಪ್ರಾಪ್ತಿ ಆಗುತ್ತದೆ. ಎಂಧು ಹೇಳುತ್ತಾರೆ. ಅವರ ಮಾತನ್ನು ಕೇಳಿ ಧರ್ಮರಾಜನು ಆ ವ್ರತದ ಆಚರಣೆ ಮಹತ್ವ ಹಾಗೂ ಯಾರು ಆಚರಿಸಿದ್ದರು ಎಂದು ಕೇಳಿದಾಗ ವೇದವ್ಯಾಸರು ಹೇಳುತ್ತಾರೆ. ಈ ವ್ರತವನ್ನು ಶ್ರೀರಾಮಚಂದ್ರನೇ ಆಚರಿಸಿ ಭಕ್ತನಿಗೆ ಅನುಗ್ರಹಿಸಿದ್ದನು. ವಾಯುದೇವರ ಅವತಾರನಾದ ಹನುಮಂತನ ಕುರಿತಾದ ವ್ರತ ಇದಾಗಿದೆ.
ಹಿಂದೆ ತ್ರೇತಾಯುಗದಲ್ಲಿ ಸಣ್ಣ ಮಗುವಾಗಿದ್ದ ಹನುಮಂತನು ಸೂರ್ಯನನ್ನು ಹಣ್ಣೆಂದು ಹಿಡಿಯಲು ಹೋದಾಗ ಇಂದ್ರನು ವಜ್ರಾಯುಧ ಪ್ರಯೋಗದಿಂದ ಪೆಟ್ಟಾಗಿ ಕೆಳಗೆ ಬಿದ್ದನು. ತನ್ನ ಅಂಶನಾದ ಹನುಮಂತನಿಗೆ ಆದ ಆಘಾತದಿಂದ ವಾಯುದೇವರು ಅವನನ್ನು ಒಂದು ಗುಹೆಯೊಳಗೆ ಕರೆದುಕೊಂಡು ಹೋಗಿ ಕುಳಿತಾಗ ಪ್ರಪಂಚದ ಜೀವಿಗಳಿಗೆಲ್ಲಾ ಉಸಿರಾಡಲು ತೊಂದರೆಯಾಯಿತು.
ಆಗ ಎಲ್ಲ ದೇವತೆಗಳು ಬ್ರಹ್ಮದೇವರ ಬಳಿ ಬಂದು ಪ್ರಾರ್ಥಿಸಲು ಅವರ ಸಲಹೆಯಂತೆ ವಾಯುದೇವರ ಬಳಿ ಹೋಗಿ ಹನುಮಂತನಿಗೆ ಚಿರಂಜೀವಿಯಾಗುವ ವರವನ್ನು ನೀಡಿ ಯಾವುದೇ ಆಯುಧಗಳ ಪರಿಣಾಮವಾಗದು ಎಂದು ವರವನ್ನು ನೀಡಿ ಆಶೀರ್ವದಿಸಿದರು ಮತ್ತು ಮಾರ್ಗಶಿರ ಶುದ್ಧ ತ್ರಯೋದಶಿಯ ದಿನದಂದು ಮಾಡಿದ ಹನುಮದ್ ವ್ರತದ ಫಲದಿಂದ ಸಕಲ ಅಭೀಷ್ಟಪ್ರದವಾಗುವುದು ಎಂಬುದನ್ನು ತಿಳಿಸಿರುತ್ತಾರೆ.
ವೇದವ್ಯಾಸ ದೇವರು ವ್ರತವನ್ನು ಮಾಡಲು ಹೇಳಿದಾಗ ದ್ರೌಪದಿ ದೇವಿ ಹಿಂದೆ ನಡೆದ ಘಟನೆಯನ್ನು ನೆನಪಿಸಿ ಹೇಳಿದಳು. ಶೃಈಕೃಷ್ಣ ಪರಮಾತ್ಮನ ಆಜ್ಞೆಯಂತೆ ದ್ರೌಪದಿ ದೇವಿಯು ಹನುಮದ್ ವ್ರತವನ್ನು ಆಚರಿಸದ್ದಳು ಮತ್ತು ವ್ರತದ ದೊರವನ್ನು ಕೈಗೆ ಕಟ್ಟಿ ಕೊಂಡಿದ್ದಳು. ಆದರೆ ಅರ್ಜುನನು ಕಲಿ ಆವೇಶದಿಂದ ಅವನೊಬ್ಬ ಸಾಮಾನ್ಯ ಕಪಿ ಅವನನ್ನು ನನ್ನ ಧ್ವಜದಲ್ಲಿ ಕಟ್ಟಿರುವೆ ಎಂದು ಅಹಂಕಾರದಿಂದ ದೋರವನ್ನು ತೆಗೆದು ಎಸೆದನು ಅಂದಿನಿಂದ ಪಾಂಡವರಿಗೆ ಕಷ್ಟವು ಆರಂಭವಾಯಿತು ಎಂದು ಹೇಳುತ್ತಾಳೆ.
ಹನುಮದ್ ವ್ರತದ ವಿಧಾನ: ಹಿಂದೆ ಸುಗ್ರೀವ ಮತ್ತು ವಿಭೀಷಣರು ಕೂಡ ಈ ವ್ರತವನ್ನು ಮಾಡಿ ಅನುಗ್ರಹಕ್ಕೆ ಪಾತ್ರರಾಗಿದ್ದರು. ಹನುಮಂತ ದೇವರನ್ನು ಹದಿಮೂರು ಗ್ರಂಥಿಗಳುಳ್ಳ ಹಳದಿ ದಾರವನ್ನು “ಓಂ ನಮೋ ವಾಯುನಂದನಾಯ ಓಂ” ಎಂದು ಆವಾಹನೆ ಮಾಡಿ ಹನುಮನ ಅಂತರ್ಗತ ಶ್ರೀರಾಮಚಂದ್ರನನ್ನು ಷೋಡಶೋಪಚಾರ ಪೂಜೆಗಳನ್ನು ಮಾಡಿ ನೈವೇದ್ಯ ಮಾಡಿ ಗೋದಿಯನ್ನು ವಾಯನ ದಾನವಾಗಿ ಕೊಡಬೇಕು ಹದಿಮೂರು ವರ್ಷಗಳ ಕಾಲ ಈ ವ್ರತವನ್ನು ಆಚರಿಸಬೇಕು ಹನುಮಂತ ದೇವರು ಋಷ್ಯಮೂಕ ಪರ್ವದಲ್ಲಿ ವಾಸವಾಗಿರುವುದರಿಂಧ ಪಂಪಾದೇವಿಯನ್ನು ಕೂಡ ಪೂಜಿಸಬೇಕು ಎಂಧು ಹೇಳುತ್ತಾರೆ.
ಹೀಗೆ ತ್ರೇತಾ ದ್ವಾಪರ ಯುಗಾಗಳಿಂದಲೂ ಮಾಡಿಕೊಂಡು ಬಂದಿರುವ ಈ ವ್ರತವು ಸಕಲ ಇಷ್ಟ ಪ್ರದಾಯಕವು ನಮ್ಮ ಸಮಸ್ಯೆಗಳನ್ನು ಪರಿಹಾರ ಮಾಡಿ ಸಕಲ ಸಮೃದ್ಧಿ ಕೊಟ್ಟು ಹನುಮಂತನು ಕಾಪಾಡುತ್ತಾನೆ