ಮಾಲೂರು: ಡಾ.ಕಿರಣ್ ಸೋಮಣ್ಣ ಚಾರಿಟಬಲ್ ಟ್ರಸ್ಟ್ ವತಿಯಿಂದ ತಾಲ್ಲೂಕಿನ ಜನ ಸಾಮಾನ್ಯರಿಗೆ ಉತ್ತಮ ಆರೋಗ್ಯ, ಶಿಕ್ಷಣ ಸೇವೆಗಳನ್ನು ಉಚಿತವಾಗಿ ನೀಡುತ್ತಾ ಬಂದಿದ್ದು ಈಗ ತಾಲ್ಲೂಕಿನ ಯುವಕ, ಯುವತಿಯರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವುದಕ್ಕೆ ಬೃಹತ್ ಮಟ್ಟದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದು ಶಾಸಕ ಕೆವೈ ನಂಜೇಗೌಡ ಅವರು ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಡಾ.ಕಿರಣ್ ಸೋಮಣ್ಣ ಚಾರೀಟಬಲ್ ಟ್ರಸ್ಟ್ ವತಿಯಿಂದ ಅಧ್ಯಕ್ಷರಾದ ಡಾ.ಕಿರಣ್ ಸೋಮಣ್ಣ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳ ಕಾರ್ಯಕ್ರಮದ ಅಧ್ಯಕ್ಚತೆಯನ್ನು ವಹಿಸಿ ಮಾತನಾಡಿದರು. ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಅಂಜನಿ ಸೋಮಣ್ಣನವರ ಪುತ್ರರಾದ ಡಾ.ಕಿರಣ್ ಸೋಮಣ್ಣ ಅವರು ನಿರಂತರವಾಗಿ ಡಾ.ಕಿರಣ್ ಸೋಮಣ್ಣ ಚಾರಿಟಬಲ್ ಟ್ರಸ್ಟ್ ಮೂಲಕ ತಾಲ್ಲೂಕಿನ ಜನತೆಯ ಆರೋಗ್ಯ ಮತ್ತು ಶಿಕ್ಷಣಕ್ಕೆ ಆಧ್ಯತೆ ನೀಡಿ ತಾಲ್ಲೂಕಿನಾದ್ಯಂತ ಉಚಿತ ಆರೋಗ್ಯ ಶಿಬಿರಗಳನ್ನು ಏರ್ಪಡಿಸುವ ಮೂಲಕ ಉತ್ತಮ ಆರೋಗ್ಯ ಮತ್ತು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ನವೀಕರಿಸುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಸೇವೆ ನೀಡುತ್ತಾ ಬಂದಿದ್ದು ಈಗ ತಾಲ್ಲೂಕಿನ ಯುವಕ,
ಯುವತಿಯರ ಭವಿಷ್ಯದ ಬಗ್ಗೆ ಯೋಚಿಸಿ ಈ ಬೃಹತ್ ಉದ್ಯೋಗ ಮೇಳವನ್ನು ತಾಲ್ಲೂಕಿನಲ್ಲಿ ಆಯೋಜಿಸಿದ್ದಾರೆ ಇದು ಅನಿವಾರ್ಯವು ಆಗಿದೆ ಏಕೆಂದರೆ ಮೊದಲು ಹೆಚ್ಚಾಗಿ ಕೃಷಿ ಮಾಡುತ್ತಿದ್ದರಿಂದ ಎಲ್ಲರೂ ಕೆಲಸದಲ್ಲಿ ತೊಡಗುತ್ತಿದ್ದರು ಪ್ರಸ್ತುತ ಕೃಷಿ ಮಾಡುವವರ ಸಂಖ್ಯೆ ಕಡಿಮೆಯಾಗಿದೆ ಅದರಂತೆ ವಿದ್ಯಾವಂತರ ಸಂಖ್ಯೆ ಹೆಚ್ಚಾಗಿದೆ ಈಗಿರುವ ಎಲ್ಲರಿಗೂ ಸರ್ಕಾರಿ ಕೆಲಸ ಸಿಗಲು ಸಾಧ್ಯವಿಲ್ಲ ಅದಕ್ಕಾಗಿ ಇಂತಹ ಕಾರ್ಯಗಳು ಆಗಬೇಕು ಇನ್ನೂ ತಾಲ್ಲೂಕಿನ ಕೈಗಾರಿಕೆಗಳ ಮುಖ್ಯಸ್ಥರನ್ನು ಕರೆದು ಸಭೆ ನಡೆಸಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಸಿಗುವ ಹಾಗೇ ಚರ್ಚಿಸುತ್ತೇನೆ ಎಂದರು.
ಈ ವೇಳೆ ಮಾತನಾಡಿದ ಡಾ.ಕಿರಣ್ ಸೋಮಣ್ಣ ಅವರು ನಮ್ಮ ಟ್ರಸ್ಟ್ ಸತತವಾಗಿ ತಾಲ್ಲೂಕಿನಲ್ಲಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತು ನೀಡಿ ಕಾರ್ಯನಿರ್ವಹಿಸುತ್ತಿದ್ದು ಈಗ ಉದ್ಯೋಗವನ್ನು ಸೇರಿಸಿಕೊಂಡು ಈ ಉದ್ಯೋಗ ಮೇಳವನ್ನು ಆಯೋಜಿಸಿದ್ದೇವೆ, ಈ ಕಾರ್ಯಕ್ರಮವನ್ನು ಸುಮಾರು ಎಂಟು ತಿಂಗಳಿಂದ ಪೂರ್ವ ತಯಾರಿ ಮಾಡಿದ್ದು ಈ ಮೇಳದಲ್ಲಿ 85ಕ್ಕೂ ಹೆಚ್ಚು ಕಂಪನಿಗಳು ಭಾಗಿಯಾಗಿದ್ದು, ಸುಮಾರು 3500 ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ನೊಂದಣಿಯಾಗಿದ್ದರು.
2200 ಯುವಕ ಯುವತಿಯರಿಗೆ ಉದ್ಯೋಗ ಸಿಕ್ಕಿದ್ದು ಸ್ಥಳದಲ್ಲೇ ನೇಮಕಾತಿ ಪತ್ರಪಡೆದು ಸಂತಸ ವ್ಯಕ್ತಪಡಿಸಿದರು. ಈ ಕಾರ್ಯವನ್ನು ಪ್ರತಿವರ್ಷ ಮುಂದುವರೆಸಿಕೊಂಡು ಹೋಗಲಾಗುವುದು ಎಂದರು.ಈ ಸಂದರ್ಭದಲ್ಲಿ ತಹಶೀಲ್ದಾರ್ ಕೆ ರಮೇಶ್, ಪುರಸಭೆ ಅಧ್ಯಕ್ಷೆ ಕೋಮಲ ನಾರಾಯಣ್, ಸ್ಥಾಯಿ ಸಮಿತಿ ಅಧ್ಯಕ್ಷ ರಾಜಪ್ಪ, ತಾಲ್ಲೂಕು ಕಸಾಪ ಅಧ್ಯಕ್ಷ ಹನುಮಂತಯ್ಯ, ಅಂಜನಿ ಸೋಮಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯನರಸಿಂಹ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಯೀಮ್ ವುಲ್ಲಾ, ಪುರಸಭೆ ಸದಸ್ಯ ಬುಲೆಟ್ ವೆಂಕಟೇಶ್, ರಾಮಚಂದ್ರಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮುನೇಗೌಡ, ಅನೇಪುರ ಹನುಮಂತಪ್ಪ, ಸತೀಶ್, ಅಂಜನಿ ಭರತ್, ನಾಗಪುರ ನವೀನ್ ಇನ್ನಿತರರು ಇದ್ದರು.