ಬೆಂಗಳೂರು: ಮಾಹಿತಿ ಹಕ್ಕು ಕಾಯ್ದೆ ಮಹತ್ವವಾದದ್ದು. ಅದನ್ನು ದುರ್ಬಲಗೊಳಿಸುವ ಪ್ರಯತ್ನವನ್ನು ಸಂಘಟಿತವಾಗಿ ತಪ್ಪಿಸಬೇಕೆಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ಅವರು ಸಲಹೆ ನೀಡಿದರು.ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ)ಆಯೋಜಿಸಿದ್ದ ಮಾಹಿತಿ ಆಯುಕ್ತರಾಗಿ ನೇಮಕಗೊಂಡ ಪತ್ರಕರ್ತರು ಮತ್ತು ಚಲನಚಿತ್ರ ಅಕಾಡೆಮಿ ಸದಸ್ಯರಾಗಿ ಆಯ್ಕೆಯಾದ ಪತ್ರಕರ್ತರನ್ನು ಅಭಿನಂದಿಸಿ, ಅವರು ಮಾತನಾಡಿದರು.
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಮಂದಿ ಪತ್ರಕರ್ತರು ಮಾಹಿತಿ ಆಯೋಗದ ಆಯುಕ್ತರುಗಳಾಗಿದ್ದಾರೆ ಮತ್ತು ಚಲನಚಿತ್ರ ಅಕಾಡೆಮಿ ಸದಸ್ಯರಾಗಿದ್ದಾರೆ. ಹಾಗಾಗಿ ನಿಮ್ಮೆಲ್ಲರ ಮೇಲೆ ಸರ್ಕಾರದ ಮತ್ತು ಸಾಂವಿಧಾನಿಕ ಹುದ್ದೆಯ ಮಹತ್ವವನ್ನು ಕಾಪಾಡುವ ಹೊಣೆಗಾರಿಕೆ ಇದೆ ಎಂದು ಅವರು ಹೇಳಿದರು.ಕೇಂದ್ರದಲ್ಲಿ ಹಿಂದೆ ಯು.ಪಿ.ಎ ಸರ್ಕಾರ ಅಧಿಕಾರದಲ್ಲಿದ್ದಾಗ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದಿದೆ. 18 ವರ್ಷಗಳ ಸುದೀರ್ಘ ಹೋರಾಟದ ಬಳಿಕ ಆ ಕಾಯ್ದೆ ಜಾರಿಯಾಗಿದ್ದು, ಆದರೆ ಅದನ್ನೀಗ ಕೇಂದ್ರ ಸರ್ಕಾರ ದುರ್ಬಲಗೊಳಿಸುತ್ತಿದೆ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ ಎಂದರು.
ಇತ್ತೀಚಿಗೆ ಸುಪ್ರೀಂಕೋರ್ಟ್ ಕೂಡ ಇದೇ ಅಸಮಾಧಾನವನ್ನು ಹೊರ ಹಾಕಿತ್ತು. ಕಾಯ್ದೆಯನ್ನು ವ್ಯಾಪಕವಾಗಿ ದುರುಪಯೋಗ ಪಡಿಸಿಕೊಳ್ಳುವ ಮಾಹಿತಿ ಹಕ್ಕು ಕಾರ್ಯಕರ್ತರ ಸಂಖ್ಯೆ ಹೆಚ್ಚುತ್ತಿದ್ದು, ಈ ಸವಾಲುಗಳನ್ನೂ ನೂತನ ಆಯುಕ್ತರಾಗಿ ನೇಮಕಗೊಂಡಿರುವ ಪತ್ರಕರ್ತರು ನಿರ್ವಹಿಸಬೇಕು ಎಂದರು.2005ರಲ್ಲಿ ಜಾರಿಗೆ ಬಂದ ಈ ಮಾಹಿತಿ ಹಕ್ಕು ಕಾಯ್ದೆಗೆ ಅ.12 ಕ್ಕೆ 20 ವರ್ಷ ತುಂಬುತ್ತಿದೆ. ರಾಜಸ್ಥಾನದ ದೇವದುಂಗ್ರಿ ಎಂಬ ಹಳ್ಳಿಯಲ್ಲಿ ಅರುಣಾ ರಾಯ್, ನಿಖಿಲ್ ದವೆ ಮತ್ತಿತರ ಚಳವಳಿಗಾರರ ಮೂಲಕ 1987ರಲ್ಲಿ ಮೊಳಕೆಯೊಡೆದ ಈ ಕನಸು, ಚಳವಳಿ ರೂಪ ಪಡೆದು ಕಾಯ್ದೆಯಾಗಿ ಅನುಷ್ಠಾನಕ್ಕೆ ಬರಲು 2005ರ ತನಕ ಕಾಯಬೇಕಾಯಿತು ಎಂದರು.
ಬಜೆಟ್ನಲ್ಲಿ ಬೇಡಿಕೆಗೆ ಮನ್ನಣೆ: ಪತ್ರಕರ್ತರ ಬೇಡಿಕೆಗಳ ಬಗ್ಗೆ ಶಿವಾನಂದ್ ಅವರು ತಿಳಿಸಿದ್ದು, ಇದೆಲ್ಲವೂ ಸರ್ಕಾರದ ಗಮನದಲ್ಲಿದೆ. ಮುಂದಿನ ತಿಂಗಳು ಸಿಎಂ ಮಂಡಿಸಲಿರುವ ಬಜೆಟ್ನಲ್ಲಿ ಪತ್ರಕರ್ತರ ಹಿತ ಕಾಯುವ ಎರಡು ಪ್ರಮುಖ ಘೋಷಣೆಗಳೂ ಇರಲಿವೆ ಎಂದರು.ಕೆಯುಡಬ್ಲೂಜೆ ಕ್ರೀಯಾಶೀಲತೆ: ವಾರ್ತಾ ಇಲಾಖೆಯ ನಿವೃತ್ತ ಹಿರಿಯ ಜಂಟಿ ನಿರ್ದೇಶಕರಾದ ಎಚ್.ಬಿ. ದಿನೇಶ್ ಮಾತನಾಡಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಪತ್ರಕರ್ತರ ಮತ್ತು ಸರ್ಕಾರದ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿರುವುದು ನಿಜಕ್ಕೂ ಸಂತಸದ ವಿಷಯ. ತಗಡೂರು ಅಧ್ಯಕ್ಷರಾದ ಮೇಲೆ ಸಂಘವನ್ನು ಕ್ರೀಯಾಶೀಲಗೊಳಿಸಿ ಹೊಸ ರೂಪ ನೀಡಿದರು ಎಂದು ಪ್ರಶಂಸಿದರು.
ಸರ್ಕಾರದ ಸಾಂವಿಧಾನಿಕ ಹುದ್ದೆಗಳಿಗೆ ಆಯ್ಕೆಯಾಗುವುದು ಅಷ್ಟು ಸುಲುಭವಲ್ಲ. ಆದರೆ ಈ ಸರ್ಕಾರದಲ್ಲಿ ಮಾಹಿತಿ ಹಕ್ಕು ಆಯೋಗಕ್ಕೆ ಪತ್ರಕರ್ತರು ಆಯ್ಕೆ ಆಗಿರುವುದು ನಿಜಕ್ಕೂ ಶ್ಲಾಘನೀಯ ಎಂದು ಅಭಿನಂದಿಸಿದರು.ಪ್ರಭಾಕರ್ ಶ್ರಮವೂ ಕಾರಣ: ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಈ ಸರ್ಕಾರದಲ್ಲಿ ಹೆಚ್ಚು ಪತ್ರಕರ್ತರು ಅನೇಕ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಈ ಸಾಂವಿಧಾನಿಕ ಹುದ್ದೆ ಪಡೆಯಲು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ಅವರ ಪ್ರೋತ್ಸಾಹ ಮತ್ತು ಶ್ರಮವೂ ಪ್ರಮುಖ ಕಾರಣ. ಪತ್ರಕರ್ತರು ಸರ್ಕಾರದಲ್ಲಿ ಉನ್ನತ ಹುದ್ದೆಗೇರುತ್ತಿರುವುದು ನಿಜಕ್ಕೂ ಪ್ರಶಂಸನೀಯ ಎಂದರು.
ಅಭಿಮಾನದ ಸಂಗತಿ: ಸನ್ಮಾನಿತರಾದ ಮಾಹಿತಿ ಆಯೋಗದ ನೂತನ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ, ಬದ್ರುದ್ದೀನ್.ಕೆ., ರಾಜಶೇಖರ್.ಎಸ್., ಡಾ.ಬಿ.ಆರ್. ಮಮತಾ ಅವರುಗಳು ಮಾತನಾಡಿ, ಕೆಯುಡಬ್ಲೂಜೆ ತನ್ನ ವೃತ್ತಿ ಬಾಂಧವರನ್ನು ಇಲ್ಲಿಗೆ ಕರೆದು ಗೌರವಿಸಿರುವುದು ಅಭಮಾನದ ಸಂಗತಿ. ಹೊಸ ಹುದ್ದೆಯಲ್ಲಿ ಬದ್ಧತೆಯಿಂದ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಚಲನಚಿತ್ರ ಅಕಾಡೆಮಿ ಸದಸ್ಯರಾದ ದೇಶಾದ್ರಿ ಹೊಸ್ಮನೆ, ಚಿದಾನಂದ ಪಾಟೀಲ್ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು. ಐಎಡಬ್ಲ್ಯೂಜೆ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ, ಕೆಯುಡಬ್ಲ್ಯುಜೆ ಮಾಜಿ ಅಧ್ಯಕ್ಷ ಜಿ.ಕೆ.ಸತ್ಯ, ರಾಜ್ಯ ಪ್ರಾಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಕಾರ್ಯದರ್ಶಿ ಸೋಮಶೇಖರ್ ಕೆರೆಗೋಡು, ಖಜಾಂಚಿ ವಾಸುದೇವ ಹೊಳ್ಳ ಹಾಗೂ ವಿವಿಧ ಜಿಲ್ಲಾ ಸಂಘದ ಪದಾಧಿಕಾರಿಗಳೂ ಸೇರಿದಂತೆ ಹಲವಾರು ಮಂದಿ ಕಾರ್ಯಕ್ರಮದಲ್ಲಿದ್ದರು.